09 March, 2010

ಯಾರಿಗೆ ಬೇಕು?

ತಾನೇ ಮಳೆಯಾಗುವ ಬಗೆ ಯಾರಿಗೆ ಬೇಕು?
ಮಳೆ ತರಿಸುವ ರೀತಿ ತಿಳಿಸಿಕೊಡಿ.
ಜೀವದಾಯಿನಿ ನದಿಗೆ ತುಂಬ ಬೇಕಿದೆ ಜೀವ...
ಒಣಗಿದ ಭುವಿಯೆದೆಗೆ ನೀಡೆ ತ್ಯಾವ,
ಅನ್ನದಾತನ ಕಣ್ಣೇರ ಅಳಿಸಬೇಕಿದೆ ನನಗೆ,
ಮಳೆ ತರಿಸುವ ರೀತಿ ಕಲಿಸಿ ಕೊಡಿ.

ಕನಸು ಬೀಳುವುದು ಯಾರಿಗೆ ಬೇಕು?
ಕನಸು ಕಾಣುವುದು ತಿಳಿಸಿ ಕೊಡಿ.....
ಹಿಂದಿನದು ಮುಂದಿನದು ಎಲ್ಲ ಬಂದು....
ತನ್ನದು ,ಪರರದು ಎಲ್ಲ ಎದುರು ನಿಂದು....
ಅಚ್ಚರಿ,ಆತಂಕ, ಆನಂದ ಇತ್ಯಾದಿ....ಯಾರಿಗೆ ಬೇಕು?
ಕನಸು ಕಾಣುವುದ ತಿಳಿಸಿ ಕೊಡಿ....
ಪಸೆ ಆರಿ ಬರಡೆದ್ದ ಮರಳುಮಣ್ಣಿನ ಮೇಲೆ ಸುರಿಯಬೇಕು ಮಂಜು ಮಳೆ ...
ಭಾವ ಕಾಣದೆ ಒಣಗಿದ ಗೀತ ಸಾಲಿನ ನಡುವೆ ನಗಬೇಕು ಹೊಸ ಗುಲಾಬಿ ಹೂವು
ಕನಸು ಕಾಣುವುದ ಕಲಿಸಿ ಕೊಡಿ.....

ತಾನೇ ಪ್ರೀತಿ ಮೂಡುವ ಬಗೆ ಯಾರಿಗೆ ಬೇಕು?
ಪ್ರೀತಿ ಮಾಡುವುದ ತಿಳಿಸಿಕೊಡಿ.....
ಪ್ರೀತಿ ಹುಟ್ಟುವ ಕ್ಷಣ, ಆಕ್ಷಣದ ಸಂಭ್ರಮ,ಕಾತರ, ಉಮ್ಮಳಿಕೆ ಯಾರಿಗೆ ಬೇಕು?
ಆ ಮೋಹ,ಅನುರಾಗ, ಆವೇಗ,ಉಬ್ಬರ...ಯಾರಿಗೆ ಬೇಕು?
ಪ್ರೀತಿ ಮಾಡುವುದ ತಿಳಿಸಿಕೊಡಿ.....
ಹಿಡಿ ಪ್ರೀತಿಗೆ ಹಂಬಲಿಸೋ ಜೀವಗಳನ್ನ ಮೃದುವಾಗಿ ತಬ್ಬಬೇಕಿದೆ,
ಮುಗಿಲತ್ತ ಮುಖ ಮಾಡಿದ ಕಣ್ಣುಗಳನ್ನ ಚುಂಬಿಸಿ ಹಗುರಾಗಿಸಬೇಕಿದೆ,
ಬಂದೂಕು ಹಿಡಿದು ಶಾಂತಿ ಹುಡುಕುವ ಎದೆಗಳಲ್ಲಿ ನೆದಬೇಕಿದೆ ಪಾರಿಜಾತದ ಸಸಿ.
ಧರ್ಮ ಜಾತಿಯ ಹೆಸರಲ್ಲಿ ಮನಕಲಕುವ ಮೌಡ್ಯಕ್ಕೆ ತೋರಬೇಕು ಪ್ರೀತಿ ಜೇನಿನ ರುಚಿ.
ಬದುಕು ಬದಲಾಗಲು ಏನೇನೆಲ್ಲಾ ಬೇಕು? ಪ್ರೀತಿ ಸಾಕು.
ಪ್ರೀತಿ ಮಾಡುವುದ ಕಲಿಸಿ ಕೊಡಿ.