16 April, 2009

ಮನಸಿನ ಕತ್ತಲೆಯನ್ನ ಬೆಳಗಾಗಿಸೆ.......????

ಇವತ್ತು ಬೆಳ್ಳಂಬೆಳಿಗ್ಗೆ bus standiನಲ್ಲಿ ತನ್ನ ಅಮ್ಮನ ಸೊಂಟದಲ್ಲಿ ಕುಳಿತಿದ್ದ ಮಗುವೊಂದು ಇದ್ದಕ್ಕಿದ್ದಂತೆ ನನ್ನ ನೋಡಿ ಮುಗುಳ್ನಕ್ಕಿತು ..ನಾನೂ ನಕ್ಕು ಅದರ ಕೆನ್ನೆಯನ್ನ ನಯವಾಗಿ ಸವರಿ, ಹಣೆಗೊಂದು ಹೂಮುತ್ತು ಕೊಟ್ಟು ಬಸ್ಸ್ಸು ಹತ್ತಿ ಕುಳಿತೆ....

******* ******** *********

Magical..simply magical.....ಬೇರೆ ಪದಗಳೇ ಸಿಗ್ತಿಲ್ಲ ಅದನ್ನ ಹೇಳೋಕೆ . ಸುಂದರವಾಗಿದೆ , cute ಆಗಿದೆ , ಅಧ್ಭುತವಾಗಿದೆ ....ಊ ಹೂ ಅದು ನಮ್ಮ ಮೇಲೆ ಉಂಟು ಮಾಡೋ ಪರಿಣಾಮಗಳನ್ನ ಗಮನಿಸಿದರೆ magical ಅನ್ನೋ ಪದವೇ ಸೂಕ್ತ ಅನ್ನಿಸುತ್ತೆ . ಮಕ್ಕಳ ನಗುವೇ ಹಾಗೆ , ಮಗುವಿನ ನಗುವಿನಂಥಾ ನಗುವೇ ಹಾಗೆ ....ಎಂಥ ತಳಕ್ಕಿಳಿದ ಮನಸ್ಸಿಗಾದರೂ ಅರೆಕ್ಕ್ಷಣದ ನೆಮ್ಮದಿ , ಹೊಸ ಭರವಸೆ ಕೊಡುವಂಥ ಅವಿಚ್ಛಿನ್ನ ಶಕ್ತಿ ಅದು . ಹಲವು ಥರದ ಸಂಕಟ ,ಉದ್ವೇಗ , ಆತಂಕ , ವ್ಯಸನ ಏನೇ ಇರಲಿ ...ಒಮ್ಮೆ ಆ ಮುಗುಳ್ನಗೆ ನೋಡಿದರೆ ....ಇದ್ದಕ್ಕಿದ್ದಂತೆ ಬಿಗಿದುಕೊಂಡ ನರಗಳೆಲ್ಲ ಸಡಿಲ ..ದೇಹ ಮನಸ್ಸಿನ ಕಣಕಣವೂ ಕನಿಷ್ಠ ಅರ್ಧದಷ್ಟಾದರೂ ನಿರಾಳ . ಅದರಲ್ಲೂ ಸ್ವಲ್ಪ ಹೆಚ್ಹಾಗಿಯೇ ನಕ್ಕುಬಿಟ್ಟರಂತೂ ....ಕ್ಲುಪ್ತ ಮನಸ್ಸೆಲ್ಲ ಕ್ಷಣಮಾತ್ರದಲ್ಲಿ ಪ್ರಫುಲ್ಲ.

ಹೌದು...ಅಂಥಾದ್ದೊ೦ದಷ್ಟು ನಗೆಯನ್ನ ಮನಸ್ಸಿನ ಜೇಬಿನಲ್ಲಿ ಮಡಿಸಿಟ್ಟುಕೊ೦ಡು ಕಾಪಾಡಿದ್ದೇನೆ ....ನಾನು ಮತ್ತು ನಾನೊಬ್ಬಳೇ ಇದ್ದಾಗ , ಬೇಸರವಾದಾಗ ನೆನಪಿನ ತೆರೆ ಸರಿಸಿದರೆ ..ಮತ್ತೆ ಹೊಸ ಉಲ್ಲಾಸ ಎಲ್ಲದಕ್ಕೂ .

ಆದರೆ ಯಾವಗಲೂ ನೆನಪಾಗೋದು ಈ ಚಂದದ ನಗೆಬೀರುವ , ಬುಧ್ಧಿಯೂ ಸೇರಿದಂತೆ ಎಲ್ಲ ಅಂಗಾಂಗಗಳೂ ಸುಸ್ಥಿತಿಯಲ್ಲಿರುವ "blessed" ಅನ್ನಬಹುದಾದ ಮಕ್ಕಳ ನಗೆಯಷ್ಟೇ ಅಲ್ಲಾ ......ಆ ಅಸಹಜ ಮಕ್ಕಳ ನಿಚ್ಚಳ ನಗೆಮಲ್ಲಿಗೆಯ ನೆನಪೂ ಧುತ್ತೆಂದು ಎರಗುತ್ತೆ . ಒಬ್ಬಳೇ ಇದ್ದಾಗ, ಕೆಲವೊಂದು ಹಾಡುಗಳನ್ನ ಕೇಳುವಾಗ , ಎಲ್ಲಿಗಾದ್ರೂ ಪಯಣಿಸುವಾಗ , ಹಸಿರು ಬೆಟ್ಟದ ತುತ್ತತುದಿಯಲ್ಲಿ ನಿಂತು ಎಷ್ಟು ಸುಂದರ ಜಗತ್ತು ಅಂತ ಖುಸಿಯಿಂದ ಮನಸ್ಸು ಕಂಪಿಸುವಾಗ , ಗೆಳೆಯರ ಜೊತೆ cofeeday ನಲ್ಲಿ ಕೂತು ಹರಟೆ ಕೊಚ್ಚುವಾಗ,...ಥಟ್ಟನೆ ಆ ನಿಷ್ಕಲ್ಮಶ ನಗು ಎದುರು ನಿಂತು ಬಿಡುತ್ತೆ. ಬುಧ್ಧಿಮಾ೦ದ್ಯ ಮಕ್ಕಳೆಂಬ ಭಗವಂತನ ಶಾಪಗ್ರಸ್ತ ಮಕ್ಕಳ ಆ ನಗುವು ಬೇರೆ ಎಲ್ಲಾ ಪುಟ್ಟ ಕಂದಮ್ಮಗಳ ನಗುವಿಗಿ೦ಥ ಮುಗ್ಧತೆಯಲ್ಲಿ, ಅಂದ ಚೆಂದಗಳಲ್ಲಿ ಕಡಿಮೆ ಅಲ್ಲವೇ ಅಲ್ಲ... ..ಆದರೆ ನನ್ಮೇಲೆ ಆ ನಗು ಬೀರುವ ಪರಿಣಾಮ ಮಾತ್ರ ಭಿನ್ನ . ಸಹಜವಾದ ಮಕ್ಕಳ ನಗು ನಮ್ಮ ಒಳ ಹೊರಗನ್ನೆಲ್ಲ ಹಗುರಾಗಿಸಿದರೆ, ಈ ಮಕ್ಕಳ ನಗು ಹೃದಯ ಭಾರವಾಗಿಸಿ ಒಳಗಡೆಗೆಲ್ಲೂ ಕರೆದುಕೊ೦ಡು ಹೊರಟುಬಿಡುತ್ತದೆ.ಸಾಮಾನ್ಯವಾಗಿ ಬಯ್ದಾಟ ,ಜಗಳಗಳು,ನಿಂದನೆ ಯಾವದೂ ಈ ಥರ ನನ್ನ ಹಿಂಡುವುದಿಲ್ಲ . ಆದರೆ ಆ ಮಕ್ಕಳ ನಗು ನೆನಪಾದಾಗೆಲ್ಲಾ ಎದೆಯೊಳಗೆ ಇದ್ದಕ್ಕಿದ್ದಂತೆ ಮಂಜುಗಡ್ಡೆಯೊ೦ದು ಹುಟ್ಟಿಕೊಂಡಂತೆ , ಅದರ ಹೆಪ್ಪುಗಟ್ಟಿಸುವಿಕೆಗೆ ಎದೆಯ ಬಿಸಿ ಆರಿ ಒಳಗೋಡೆಗಳೆಲ್ಲ ತನ್ನಷ್ಟಕ್ಕೇ ಸಂಕುಚಿಸಿದಂತೆ ಅನ್ನಿಸಿಬಿಡುತ್ತೆ. ಒಂದು ದಪ್ಪನೆಯ ಕಂಬಳಿ ಹೊದ್ದುಕೊಂಡು ಯಾರಿಗೂ ಕಾಣದಂತೆ ಅಣುವಿನಷ್ಟು ಸಣ್ಣಕ್ಕೆ ಮುದುರಿಕೊಂಡು ಕುಳಿತು ಬಿಡಬೇಕೆನ್ನುವ ಭಾವ.


***** ***** ******


ಬಸ್ಸಿನ Radioದಲ್ಲಿ ಬರುತ್ತಿದ್ದ ಆ ಹಾಡು ಕಿವಿಗೆ ಬಿದ್ದದ್ದೇ ಶುರುವಾಯ್ತು ಈ ಭಾವನೆಗಳ ಧಾಳಿ .

यह तो हैं सर्दी में धुप की किरने ,

उतरें जो आँगन को सुन्हेरा सा करने ,

मनन के अंधेरों को रोशन सा कर दें ,

ठिठुरती हथेली की रंगत बदल दें ,

(ಚಳಿಗಾಲದಲ್ಲಿ ಬೀಳುವ ಬಿಸಿಲಿನ ಕಿರಣಗಳಿವು,

ಅಂಗಳವನ್ನ ಚೆನ್ದವಾಗಿಸಲು ಇಳಿದು ಬಂದಿಹವು ,

ಮನಸಿನ ಕತ್ತಲೆಯನ್ನ ಬೆಳಗಾಗಿಸೆ,

ಕಂಪಿಸುವ ಕೈ ಬರಹದ ಬಣ್ಣವನ್ನೇಬದಲಾಯಿಸೆ...)

Taare Zameen par ಎಂಬ ಸಿನಿಮಾದ ಹಾಡೊಂದರ ಅದ್ಭುತ ಸಾಲುಗಳವು .. ಮತ್ತೆ ಮತ್ತೆ ನನ್ನ ಕಾಡುವ ಹಾಡದು . ಪುಸ್ತಕಗಳ ಬಗ್ಗೆ some books to taste, some to eat and some to be digested....ಅನ್ನೋ ಮಾತಿರುವಂತೆ ಈ ಹಾಡುಗಳೂ ಹೀಗೇ ಏನೋ....ಒಂದೊಂದು ಕಿವಿಮೇಲೆ ಬಿದ್ದು ಜಾರಿಹೊಗುತ್ತವೆ, ಕೆಲವು ಮನಸಿನಾಳದ ಕದ ತಟ್ಟುತ್ತವೆ, ಇನ್ನೂ ಕೆಲವು ಒಳಗಡೆಯೇ ಉಳಿದು ಹೋಗುತ್ತವೆ.
ನಂಗೆ ಈ ಸಾಲುಗಳು ಕಾಡಿ ಕಾಡಿ ಅಂಥ ನಗುವನ್ನ ನೆನಪಿಸೋದೂ, ಅಂತಹ ನಗುವಿನ ಜೊತೆ ಈ ಹಾಡು ನೆನ್ಪಾಗೋದೂ ಆಗ್ತಾನೇ ಇರುತ್ತೆ.ಪ್ರತಿಬಾರಿ ಕೇಳಿದಾಗಲೂ ಕಣ್ಣು ಮಂಜಾಗಿ ಹೋಗುತ್ತವೆ, ಅದರಲ್ಲೂ " मनन के अंधेरों को रोशन सा कर दें (ಮನಸಿನ ಕತ್ತಲೆಯನ್ನ ಬೆಳಗಾಗಿಸೆ)" ಅನ್ನೋ ಸಾಲು....ಮನಸ್ಸಿನ ಕತ್ತಲನ್ನ ಬೆಳಕಾಗಿಸೋದು ಸಾಮಾನ್ಯವಾದ ಮಾತೆ?

ಎಂಥೆಂಥ ಚಿಂತನ ಮಂಥನಗಳು, ಅಧ್ಯಾತ್ಮಿಕ ಅನುಭೂತಿಗಳು, ವ್ರತ, ತಪ, ಜಪಗಳ ಶಕ್ತಿಗೆಲ್ಲ ನಿರಂತರ ಸವಾಲಾದ ಮನಸ್ಸಿನ ಕತ್ತಲೆಯನ್ನ ಹೊಡೆದೋಡಿಸುವ ಶಕ್ತಿ ಈ ಮಕ್ಕಳಿಗಿದೆಯೆ? ಇರಬಹುದು ಅಂತಾನೆ ಪ್ರತಿ ಸಾರಿಯೂ ಅನ್ನಿಸುತ್ತಲ್ಲಾ....
ಕ್ಷುಲ್ಲಕ ಕಾರಣಗಳಿಗೆ ಮುದುಡಿ ಹೋಗುವ ಮನಸ್ಸು ಆ ಮಕ್ಕಳ ನೆನಪಾದಾಗೆಲ್ಲಾ....ಈ ಜೀವಗಳ ನೋವಿನ ಮುಂದೆ ನನ್ನದೇನು ಮಹಾ ಎಂಬ ಎಚ್ಚರಿಕೆ ತಾಳುತ್ತೆ...ನೋವಿನಲ್ಲೂ ನಕ್ಕು ನಗಿಸಿಬಿಡುವ ಅವುಗಳ ವಿಶಿಷ್ಟ ಶಕ್ತಿಗೆ ನನ್ನ ಅಹಂಕಾರ ತನ್ನಷ್ಟಕ್ಕೆ ತಾನೇ ತಲ್ಲಣಿಸಿ ಕರಗಿದಂತೆ ಅನ್ನಿಸುತ್ತದೆ. ಎಂಥಾ ಕ್ಲಿಷ್ಟ ಪ್ರಸಂಗಗಳಿಗೂ ಜಗ್ಗದ ಮೊಂಡುಬಿದ್ದ ನನ್ನ ಮನಸ್ಸು ಕೂಡ ಈ ಸಾಲುಗಳನ್ನ ಕೇಳಿದೊಡನೆ ನಲುಗಿಹೊಗುತ್ತದಲ್ಲಾ.....ನಾನೂ ಕಣ್ಣೇರಾಗುತ್ತೇನಲ್ಲ.....

Mentally challenged ಅಂತಾ ಕರೆಯಲ್ಪಡೊ ಮಕ್ಕಳು , ಅವುಗಳ ತಂದೆ ತಾಯಿಯರ ಅನುಕ್ಷಣದ ಸಂಕಟಗಳನ್ನೆಲ್ಲ ಮತ್ತೆ ಮತ್ತೆ ನೆನಪಿಗೆ ನುಗ್ಗಿಸಿ ತರುವ ಸಾಲುಗಳವು. ಹೀಗೆಲ್ಲ ಯಾಕೆ ಅನ್ನೋ ಪ್ರಶ್ನೆ ಕೇಳುವ ಕಸುವನ್ನೂ ಉಳಿಸದೆ ಮೂಕಾಗಿಸುವ ಕ್ರೌರ್ಯವಿದೆ ಆ ಮಕ್ಕಳ ಅಸ್ತಿತ್ವದಲ್ಲಿ . ಇದೆಲ್ಲ ನಿಜಕ್ಕೂ ದೇವರು ಮಾಡಿದ್ದ? ದೇವರು ಎಂಬುದೊಂದು ನಿಜಕ್ಕೋ ಇದೆಯಾ ಅನ್ನೋ ಸವಕಲು ತರ್ಕ ಇನ್ನೊಮ್ಮೆ ಶುರು .ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿರುವ, ಎಲ್ಲ ಇದ್ದೂ ಇರದ ಯಾವುದಕ್ಕೂ ತಡಕಾಡುವ ನಾವೆಲ್ಲಾ normal ಮನುಷ್ಯರಾ ? ಆ ಮಕ್ಕಳ೦ತಲ್ಲದಿದ್ದರೂ ಅನುದಿನ ಹೊಸ ಹೊಸ ವಾ೦ಛೆಗಳಲ್ಲಿ ಬದುಕುವ ನಾವೆಲ್ಲಾ ಒಂಥರಾ psychologically challenged ಮನುಷ್ಯರಲ್ಲವ?....ಅಂತೆಲ್ಲಾ ಮುಖಕ್ಕೆ ತಿವಿದು ಕೇಳಲ್ಪಡುವ ಅನುದಿನದ ಪ್ರಶ್ನೆಗಳವು. ನಾವು ಏನೂ ಮಾಡೋಕೆ ಆಗೋದೇ ಇಲ್ಲವ ಇಂಥ ವಿಷಯಗಳಲ್ಲಿ??????........


**** ***** ******


ಬಸ್ಸು ಅರೆ ಕ್ಷಣ ನಿಂತು ಮತ್ತೆ ಚಲಿಸಿದಂತೆ ಆದಾಗ ಎದುರಿಗೆ ನೋಡಿದೆ . ಕಣ್ಣು ಪಿಳುಕಿಸುತ್ತಿದ್ದ೦ತೆ ಅಡ್ಡ ನಿ೦ತಿದ್ದ ಕಂಬನಿಗಳು ರೆಪ್ಪೆಯ ಕೆಳಗೆ ಅಡಗಿಕೊಂಡು ಕಣ್ಣು ನಿಚ್ಚಳ ಗೊಂಡವು . ವಯಸ್ಸು ಹೆಚ್ಚಿದ್ದರೂ ಮನಸ್ಸು ಮಗುವಿನ ಮಟ್ಟದಿಂದ ಮೇಲೇರದ ಜೊತೆಗೆ ಕಣ್ಣೂ ಕಾಣಿಸದ ಜೀವವೊಂದು ಎದುರಿಗೆ ಬಂದು ನಿಂತಿತ್ತು ... ನಾನು ಎದ್ದು ಅವ್ರನ್ನ ಕೂರಿಸಬೇಕು 'ಅನ್ನಿಸುವಷ್ಟರಲ್ಲಿ' ಪಕ್ಕದಲ್ಲಿದ್ದ ವ್ಯಕ್ತಿ ಜಾಗ ಬಿಟ್ಟುಕೊಟ್ಟಾಗಿತ್ತು . ಪೆಚ್ಚಾದೆನೋ ಇಲ್ಲವೊ ...ಜಾಗ ಬಿಟ್ಟು ಕೊಟ್ಟವರ ಕಡೆ ನೋಡಿದೆ...ಅವರಿಗೊಂದು ಕಾಲು ಇರಲೇ ಇಲ್ಲ. ನನ್ನೆಡೆ ನೋಡಿ ಸಹಜವಾಗಿ ನಕ್ಕರು. ಬುಟ್ಟಿ ತುಂಬಾ ತುಂಬಿದ್ದ ಸೆಗಣಿಯನ್ನು ಥೊಪ್ಪೆ೦ದು ಮುಖಕ್ಕೆ ರಾಚಿದಂತೆ ಆಗಿತ್ತು . ಅದರ ವಾಸನೆಗೆ ಅಸಹ್ಯಪಟ್ಟುಕೊಳ್ಲೋ ಶಕ್ತಿಯೂ ಇಲ್ಲವೆಂಬಂಥ ಕಣ್ಗತ್ತಲು . ಹೊರಕ್ಕೆ ತುಳುಕಿದ ಕಣ್ಣೀರಿಗೆ ಒಳಗಿನ ಜಡತೆಯನ್ನು ತೊಡೆಯುವ ಶಕ್ತಿ ಇಲ್ಲವಾ? ಸ್ವತಹ ಧನಾತ್ಮಕ ಹಾಗೂ ಪರಿಣಾಮಕಾರಿಯಾದ ಕ್ರಿಯೆಯಾಗಿ ಬದಲಾಗದ ಭಾವುಕತೆ ವ್ಯರ್ಥವಲ್ಲವ?