23 March, 2009

ಹಾಗಾಗೋದು ಬೇಡ please....

ನಲ್ಮೆಯ ಗುಬ್ಬಚ್ಚಿ,
ಪ್ರತಿ ಬಾರಿ ಸಿಕ್ಕಾಗಲೂ ಏನಾದರೊಂದು ಕೀಟಲೆ, ತರಲೆ ನಿನ್ನದು . ನಿನ್ನ ಕಿಚಾಯಿಸುವಿಕೆಯ ಪ್ರತಿ ಮಾತಿನಲ್ಲೂ ತುಂಬಿದ್ದ ಗರಿ ಗರಿ ಪ್ರೀತಿ ಮುಗ್ಧತೆ.... ಓಹ್ ಆ ದಿನಗಳು ಹಾಗೆ ಸ್ಥಬ್ದವಾಗಿ ಹೋಗ್ಬಾರ್ದಿತ್ತಾ ಅನ್ನಿಸ್ತಿದೆ. ನಮಗೆ ಮಾತಾಡೋಕೆ ಯಾವಾಗಲೂ ವಿಷಯಗಳೇ ಬೇಕಾಗಿರಲಿಲ್ಲ ಅಲ್ವ? ಸುಮ್ಮನೆ ಒಂದೆಡೆ ಸೇರಿದ್ರೆ ಸಾಕು ಅದೆಲ್ಲಿಂದ ವಿಷಯಗಳು ಬರ್ತಿದ್ದವೋ ...ಜಿದ್ದಿಗೆ ಬಿದ್ದವರಂತೆ ಒಬ್ಬರಿಗೊಬ್ಬರು ಏನಾದರೊಂದು ಹೇಳ್ತಾ ಇರ್ತಿದ್ವಿ, ಹ೦ಚಿಕೊಳ್ತಾನೆ ಇರ್ತಿದ್ವಿ, ನಿನ್ನ ರೇಗಿಸೋದ್ರಲ್ಲಿ ನಂಗೆ ಎ೦ಥಾದ್ದೋ ಆನಂದ....ನೀನೇನು ಕಮ್ಮಿ ನನ್ನನ್ನ ಗೊಳಾಡಿಸೋದೆ ಮುಖ್ಯ ಉದ್ಯೋಗವಾಗಿತ್ತ್ತು ನಿಂಗೆ .
ನಾವು ಒಟ್ಟಾಗಿ , ಇಬ್ಬರ ಮನಸ್ಸೂ ಒಂದೇ ಅನ್ನುವಂತೆ ಇನ್ನೊಂದರ ಬಗ್ಗೆ , ಇನ್ನೊಬ್ಬರ ಬಗ್ಗೆ ಮಾಡಿದ ತಿಪ್ಪಣಿಗಳೆಷ್ಟೋ ....ಇಬ್ಬರದೂ ಬೇರೆ ದಿಕ್ಕು ಅನ್ನುವಂತೆ ಬಿಸಿ ಬಿಸಿ ಚರ್ಚೆ ಮಾಡಿದ್ದೆಷ್ಟೋ ..ಆದರೂ ನಾವು ಒಂದಾಗಿ ನಡೆದದ್ದೇ ಹೆಚ್ಚು ..ಇಬ್ಬರಲ್ಲೂ ಭಯವಿತ್ತೇ ಮತ್ತೆ ಜಗಳ ಮಾಡ್ಬಿಡ್ತೀವಿ ಅಂತ ? ಗೊತ್ತಿಲ್ಲ .....ಒಟ್ಟಿನಲ್ಲಿ ಇಬ್ಬರಲ್ಲಿ ಯಾರೊಬ್ಬರಿಗೂ ಪರಸ್ಪರ ನೋಯಿಸೋದು ಇಷ್ಟ ಆಗ್ತಿರ್ಲಿಲ್ಲ ಅಲ್ಲವಾ ?
ಬಹಳಷ್ಟು ಸಾರಿ ನಿನ್ನ ಹತ್ರ ವಾದ ಮಾಡೋಕೆ ನನಕೈಲಿ ಆಗತಾನೆ ಇರ್ಲಿಲ್ಲ. ನಿನ್ನ ಮಾತು, ತರ್ಕಗಳೋ ನಿರರ್ಗಳ ...ನಿರಂತರವಾಗಿ ಧುಮ್ಮಿಕ್ಕೋ ಭರಚುಕ್ಕಿಯಂತೆ. ನಾನೇ ಒಮ್ಮೊಮ್ಮೆ ಮಾತಾಡೋದು ಬಿಟ್ಟು ಸುಮ್ಮನೆ ನಿನ್ನ ಕಡೆ ನೋಡ್ತಾ ಇದ್ದುಬಿಡ್ತಿದ್ದೆ ..ನೀನು ಮಾತ್ರಾ ಮುಂದುವರಿಸ್ತಾನೆ ಇರ್ತಿದ್ದೆ ..ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಜ್ನಾನೋದಯ ಆದಂತೆ ..ಯಾಕೋ ಸುಮ್ಮನಾದಿ ? ಏನ್ ಯೋಚಿಸ್ತಿದ್ದಿ ? ಅಂತ ತಲೆಗೆ ಮೊಟಕಿ ಕೇಳ್ತಿದ್ದಿ, ಸುಮ್ಮನೆ ಮುಗುಳ್ನಗೋದು ಒಂದೇ ನಾನ್ ಮಾಡ್ತಿದ್ದ ಕೆಲಸ .
ಆದ್ರೆ ಇದ್ದಕ್ಕಿದ್ದಂತೆ ನಿನ್ನ ಮಾತು ಕಡಿಮೆ ಆಗಿದೆ....ಏನಾಯ್ತು.....? ಯಾವ ವಿಷಯ ನಿನ್ನಲ್ಲಿ ಕೊರೀತಿದೆ ಅಂತ ಒಮ್ಮೆ ಹೇಳಿ ಬಿಡಬಾರ್ದ ?ನಿನ್ನದು ಮಾಮೂಲು ಮೌನವಾಗಿದ್ರೆ, ಯಾಕೋ ಬೇಜಾರಾಗಿದ್ದೀಯ ಆಮೇಲೆ ಮತ್ತೆ ಸರಿ ಹೋಗ್ತೀಯ . ಆದ್ರೆ ಸ್ವಲ್ಪ ಏನೋ ಬೇರೆ ಅನ್ನಿಸ್ತಿದೆ ಗೆಳತಿ ಅದೇನು ಹೇಳಮ್ಮ please.....
ನಮ್ಮಲ್ಲಿ ಆತ್ಮೀಯತೆಗೆ ಕೊರತೆ ಯಾವತ್ತಾದರೂ ಇತ್ತ ಹೇಳು? ಎಲ್ಲ ಹೇಳ್ಕೊಳ್ತೀಯ ...ದುಃಖವಾದ್ರೆ ತೊಡೆಮೇಲೆ ಮಲಗಿ ಕಣ್ಣೀರು ಸುರಿಸ್ತೀಯ, ಭುಜಕ್ಕೊರಗಿ ಹಾಗೇ ಕಣ್ಮುಚ್ಚಿ ಸುಮ್ಮನಿದ್ದು ಬಿಡುತ್ತೀಯ ಸ್ವಲ್ಪ ಹೊತ್ತು ..... ನಾನೂ ಜಾಸ್ತಿ ಮಾತಾಡಿಸೋಲ್ಲ ಆಗ ನಿನ್ನ......ಯಾಕಂದ್ರೆ ನ೦ಗೆ ಗೊತ್ತು ನನ್ನ ಜೊತೆಗಿದ್ದೂ ಸ್ವಲ್ಪ ಹೊತ್ತು ಒಂಟಿಯಾಗಿರೋಕೆ ನಿಂಗೆ ಇಷ್ಟ ಅಂತ. ಆದರೂ ನಿಂಗೆ ಏನೋ ಆಗಿದೆ ಅನ್ನಿಸ್ತಿದೆ , ಯಾಕೆ ಏನಾಯ್ತೆ ಅಂದ್ರೆ ನಾನು ನಾರ್ಮಲ್ ಇದೀನಲ್ಲ ಅಂತೀಯ. ನಿನ್ನ ತಮಾಷೆ ಮಾಡೋ ಸ್ವಭಾವ ಎಲ್ಲೋಯ್ತು ಅಂದ್ರೆ ...ಯಾಕೋ ಹೀಗೆ ಇರ್ಬೇಕು ಅನ್ನಿಸ್ತಿದೆ ಅಂತೀಯ ...ಏನಂಥ ಮಾಡ್ಲಿ ಹೇಳು ? ಕಷ್ಟ ಆಗ್ತಿದೆ ಕಣೆ .
ಹೌದು, ನಂಗೂ ಹೇಳೋದಿದೆ ಸ್ವಲ್ಪ....
...ಯಾವತ್ತೂ ನಿನ್ನ ಗೆಳೆಯನಾಗಿಯೇ ಉಳಿದುಬಿಡುವ ಅನಿವಾರ್ಯತೆ ನನಗಿದೆ . ನನ್ನೆಲ್ಲ ಭಾವನೆಗಳನ್ನ ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಶತಾಯ ಗತಾಯ ನಾನು ಕಟ್ಟಿ ಇಡಲೇ ಬೇಕಾಗಿದೆ . ಅದಕ್ಕೇ ನಾನು ನಿಂಗೆ ಯಾವತ್ತೂ ಹೇಳಲಿಲ್ಲ ನಂಗೆ ನೀನು ಇಷ್ಟ ಅಂತ . ತಪ್ಪೋ ಸರಿನೋ ಗೊತ್ತಿಲ್ಲ , ನಿನ್ನ hurt ಮಾಡೋಕೆ ಮಾತ್ರ ಮನಸ್ಸ್ಸು ಒಪ್ಪಲ್ಲಿಲ್ಲ ಕಣೆ . ನೀನು ಇಷ್ಟ ಅಂತ ಹೇಳಿ, ಇತ್ತ ಇರುವಷ್ಟು ಹೊತ್ತು ಸದ್ದಿಲ್ಲದೆ ಕಂಪು ಬೀರಿ - ಸುಳಿವನ್ನೆ ಕೊಡದೆ ಕರಗಿ ಹೋಗಬೇಕೆನ್ನುವ ಮೃದುಲ ಆಕಾಶಮಲ್ಲಿಗೆಯಂಥ ನಿನ್ನ ಮನಸ್ಸನ್ನ ಯಾಕಾದ್ರೂ ತಲ್ಲಣಗೊಳಿಸಲಿ? ಅತ್ತ ಜಾತಿ, ಕಟ್ಟಳೆಗಳಲ್ಲಿ ಕಳೆದುಹೋಗಿರುವ ನಮ್ಮ ಹಿರಿಯರ ಭಾವನೆಗಳನ್ನ ಹೇಗಾದ್ರೂ ನೋಯಿಸ್ಲಿ? ನನ್ನ ದುರಾದೃಷ್ಟ, ನಿನ್ನ ಪ್ರೀತಿಸೋ ಮಾತು ದೂರ ಇರ್ಲಿ ನಿನ್ನ ಬಗ್ಗೆ ಹೀಗನ್ನಿಸಿದೆ ಅಂತ ಹಂಚ್ಕೊಳ್ಲೋಕೂ ಸ್ವಾತಂತ್ರ್ಯ ಇಲ್ಲದ ಪರಿಸ್ಥಿತಿ .ನಿನ್ನ ನಿಷ್ಕಲ್ಮಶ ಸ್ನೇಹ ,ಕೀಟಲೆ ,ಒಣ ಜಗಳಗಳು ,ನಾವು ಒಟ್ಟಾಗಿ ಮಾಡೋ ಟೀಕೆಗಳು , ವಾದಗಳಲ್ಲೇ ಉಸಿರಾಡಿ ಬಿಡಬೇಕು atleast ನೀನು ದೂರ ಹೋಗುವ (?) ವರೆಗಾದರೂ ಅಂತ ಅನ್ಕೊಂಡೆ......ಆದ್ರೆ ನಿನ್ನ ಮೌನ ಸಾವಿರಾರು ಪ್ರಶ್ನೆ ಕೇಳ್ತಿದೆ , ಒಳಗಿನಿಂದ ಏನನ್ನೋ ಹುಡುಕಿ ಹೊರಗೆಳೆದಂತೆ ಅನ್ನಿಸ್ತಿದೆ . ಎಲ್ಲವನ್ನೂ ಹೇಳಿ ಇದೊಂದನ್ನೇ ಹೇಗೆ ಒಳಗಡೆಯೇ ಬಚ್ಚಿಡಲಿ ಹೇಳು?
ಅವತ್ತು ಮತ್ತೆ ನೀನಂದೆ, ನಿನ್ನ ನೋಡಿದ್ರೆ ಯಾಕೋ ಇತ್ತೀಚೆಗೆ respect ಕೊಡ್ಬೇಕು ಅನ್ನ್ಸುತ್ತೆ ಅಂತ . ನಿಜಕ್ಕೂ current shockಹೊಡೆದಂತೆ ಆಗಿದ್ದು ಅವತ್ತೇ ನಂಗೆ . ಆ ಮಾತುಗಳಲ್ಲಿ ಮೇಲು ನೋಟಕ್ಕೆ ಏನೂ ವಿಶೇಷತೆ ಅನ್ನಿಸಲಿಲ್ಲ ಆದರೂ ಏಕೋ ಏನೋ ಇದ್ದಕ್ಕಿದ್ದಂತೆ ಎಲ್ಲಾ ಕಳೆದುಕೊಂಡಂತೆ ಆಗ್ಬಿಡ್ತು . ಗರಿ ಗರಿ ಪ್ರೀತಿ ನಲಿದಾಡೋ ಜಾಗದಲ್ಲಿ ಇದೆಲ್ಲಿಂದ ಹುಟ್ಟಿದ್ದು respect ? ನಂಗೆ ಭಯವಾಗಿದ್ದು ನೀನು ಇದ್ದಕ್ಕಿದ್ದಂತೆ ದೂರಾಗಿಬಿಟ್ಟ್ಯೇನೋ ಅಂತ .....ಅಕ್ಷರಶಃ ನಾನು ನಿನ್ನ ಬದುಕಲ್ಲಿ ಏನಾಗಿದ್ದೀನೋ ಅದೇ ಆಗಿರೋಕೆ ಇಷ್ಟಪಡ್ತೀನಿ ಕಣೆ...ನೀನು ಕೂಡ ಏನಾಗಿದ್ದೀಯೋ ಅದೇ ಆಗಿರು ....ನಿನ್ನ ಚೇಷ್ಟೆಗಳು ಹಾಗೇ ಮುಂದುವರಿಯಲಿ , ನನ್ನನ್ನ ಕಿಚಾಯಿಸುವ ನಿನ್ನತನ ನಿನ್ನದೇ ಆಗಿರಲಿ.
ತನ್ನ ಪಾಡಿಗೆ ತಾನು ದೇವರಂತೆ ಸುಮ್ಮನಿರುವ ಮೂರ್ತಿಗೆ, ನಮ್ಮದೇ ಭಕ್ತಿ, ಭಾವ ಆಚಾರ-ವಿಚಾರ, ಅಲಂಕಾರಗಳನ್ನ ಮಾಡಿ ಏನೋ ಒಂದು ಹೆಸರಿಟ್ಟು, ಸರ್ವಶಕ್ತಿಗಳನ್ನೂ ನೀಡಿ, ಜವಾಬ್ದಾರಿಗಳನ್ನು ಹೇರಿ ನಾವು ಅರಾಮಾಗಿ ಇದ್ದುಬಿಡ್ತೀವಲ್ಲವ? ಹಾಗೆಯೇ ನಮ್ಮ ಬಾ೦ಧವ್ಯ್ಯಕ್ಕೊಂದು ಹೆಸರಿಲ್ಲದ ಗುಡಿ ಕಟ್ಟಿ, ಇರುವ respectಅನ್ನು ಅದಕ್ಕೇ ಕೊಟ್ಟುಬಿಟ್ಟು ಸುಮ್ಮನೆ ಇದ್ದುಬಿಡೋದು ಸೂಕ್ತ ಅಲ್ಲವಾ?
ಯಾರುಬೇಕಾದರೂ ಮಾಡಬಹುದಾದ ಸಣ್ಣ ಪುಟ್ಟ ಸಹಾಯಗಳಿಗೆ, ನೀನು ತೊಂದರೆಯಲ್ಲಿದ್ದಾಗ ನಿನ್ನ ಪ್ರೀತಿಗೆ ಕೇವಲ ಪ್ರತಿ ಪ್ರೀತಿಯಂತೆ ಮೂಡಿಬಂದ ನನ್ನ ಸಾ೦ತ್ವನದ ಮಾತುಗಳಿಗೆ ಮಹತ್ವವಾದುದೇನನ್ನೋ ಆರೋಪಿಸಿ, ನನ್ನನ್ನ ಈ ರೀತಿ ನೋಡಬೇಡ. ನಿನ್ನ ದೊಡ್ಡ ದೊಡ್ಡ ಮಾತುಗಳನ್ನ ಕೇಳ್ತಾ ಇದ್ದರೆ ನಂಗೆ ನಾನು ಏನಾಗಿಬಿಟ್ಟೆನೋ ಅಂತ ಭಯ ಆಗ್ತಿದೆ.ಈ Respect ಅನ್ನೋ ಭೂತ ಗೆಳೆತನಕ್ಕೆ ಸಲ್ಲದ ಭಿಡೆ ಹುಟ್ಟಿಸಿ ನಮ್ಮಿಬ್ಬರ ಮಧ್ಯೆ verticle distance ಹುಟ್ಟಿಸೋದು ಬೇಡ.ಪ್ರೀತಿ ಇದ್ದೂ ಭೌತಿಕವಾಗಿ , ಮಾನಸಿಕವಾಗಿ.....ದೂರ ಆಗೋದಕ್ಕಿಂತ ಈ ರೀತಿ ಲಂಬವಾಗಿ ಆಗಿ ದೂರ ಆಗೋದು ತುಂಬಾ ಅಂದ್ರೆ ತುಂಬಾ ನೋವು ಕೊಡುತ್ತೆ ಕಣೆ. ಹಾಗೆಲ್ಲಾ ಆಗೋದು ಬೇಡ...Please...... .
ಇತಿ ನಿನ್ನ ಪ್ರೀತಿಯ,
ಚಿರವಿಸ್ಮಿತ.
***** ***** *****
ಓದಿಮುಗಿಸಿದ ಕ್ಷಣವೇ ಕಾಗದದಮೇಲೆ ಪಟ ಪಟನೆ ಉದುರಿದ ಅವಳ ಕಂಬನಿಗಳು ಸುಮ್ಮನಿರುವ ಬದಲು ಭೂತಕನ್ನಡಿಯಂತೆ ಕೊನೆಯಸಾಲಿನ ಅಕ್ಷ್ಶರಗಳನ್ನು ಇನ್ನಷ್ಟು ಸ್ಪುಟವಾಗಿಸಿವೆ...ಮತ್ತೆ ಮತ್ತೆ ಕಾಡುತ್ತಿರುವ ಹಾಡು ಇನ್ನೊಮ್ಮೆ ನೆನಪಾಗಿದೆ. ...."ಅರಳುತಿರು ಜೀವದಗೆಳೆಯ ಸ್ನೇಹದ ಸಿಂಚನದಲ್ಲಿ ,ಬಾಡದಿರು ಸ್ನೇಹದ ಹೂವೆ ಪ್ರೇಮದ ಬಂಧನದಲ್ಲಿ ...ಮನಸಲ್ಲೇ ಇರಲಿ ಭಾವನೆ ....ಮಿಡಿಯುತಿರಲಿ ಮೌನವೀಣೆ ಹೀಗೆ ಸುಮ್ಮನೆ ".......

10 March, 2009

ಕಾಡದಿರಲಿ ನಿನ್ನನೆಂದೂ...

ಮನಸಿನ ಒಳ ಹೊರಗನ್ನೆಲ್ಲಾ ಆವರಿಸಿರುವ ಮಂದಾರ ಸಿಂಚನವೇ,
ಮಟ ಮಟ ಮಧ್ಯಾಹ್ನದ ಹೊತ್ತು.....ಗೋಡೆಗೊರಗಿ bolcony ಯ ಮೂಲೆಯಲ್ಲಿ ಒಬ್ಬನೇ ಮುದುರಿ ಮುದುರಿಕೊಂಡು ಕೂರುತ್ತೇನೆ ...ಎಷ್ಟು ನನ್ನ ಮೊಳಕಾಳನ್ನು ನಾನೇ ಗಟ್ಟಿಯಾಗಿ ತಬ್ಬಿಕೊಂಡರೂ ಒಳಗೆಲ್ಲಾ ಮುಟ್ಟಲಾಗದ ಗಟ್ಟಿ ನಿರ್ವಾತ.

ಎಷ್ಟು ಹೊತ್ತಾಯ್ತೊ ನಾನು ಹೀಗೆ ಕೂತು , ತಂಗಾಳಿಗೆ ಅಲ್ಲಾಡುತ್ತಾ ನನ್ನ ತಲೆ ನೇವರಿಸುತ್ತಿರುವ ತೆಂಗಿನ ಗರಿಯ ನೆರಳು ಸುಸ್ತಾಗಿ ಕೈ ಚೆಲ್ಲಿದೆ ಇನ್ನು ಆಗೋಲ್ಲ ನನ್ನಿಂದ ಸಮಾಧಾನ ಮಾಡೋಕೆ ಅಂತ. ಇಲ್ಲಿ ನೋಡು ನನ್ನ ಪಾದದ ಬುಡದಲ್ಲಿ ಸಾಲುಗಟ್ಟಿರೊ ಇರುವೆಗಳೆಲ್ಲ ಒಂದೊಂದೇ ಮುಟ್ಟಿ ಮುಟ್ಟಿ ಮುಂದೆ ಹೋಗುತ್ತಾ ಇದಾವೆ, ಶವಸಂಸ್ಕಾರಕ್ಕೆ ಹೋದಾಗ ಭಾರವಾದ ಎದೆಯಿಂದ ಎಲ್ಲರೂ ಒಂದೊಂದು ಹಿಡಿ ಮಣ್ಣು ಹಾಕಿ ಹೋಗ್ತಾರಲ್ಲ ಹಾಗೆ.

ಅಮ್ಮ,ಅಪ್ಪ,ತಮ್ಮ ತಂಗಿ,ಗೆಳೆಯರೆಲ್ಲ ಸೇರಿ ಹೊದಿಸಿದ್ದ ಪ್ರೀತಿಯ ಹಚ್ಚಡದ ನೂಲಿನ ಸಣ್ಣ ಸಣ್ಣ ಎಳೆಗಳ ಮಧ್ಯದಲ್ಲೇ ಜಾಗ ಮಾಡಿಕೊಂಡು ಬಂದುಬಿಟ್ಟ್ಯಲ್ಲ...ಹೇಯ್ ಅದು ನಿನ್ನ ತಪ್ಪು ಅಂತ ಹೇಳ್ತಾ ಇಲ್ಲಪ್ಪಾ ನಾನು...ಆದರೂ ಎಲ್ಲಿ ಹೋದೆ, ಯಾಕೆ ಹೋದೆ ಅಂತಾನೂ ಹೇಳ್ದೆ ಹೋಗ್ಬಿಡೋದಾ ಪುಟ್ಟಿ?

ಹೋಗ್ಲಿ ಬಿಡು...ಏನಾದರೂ ಆಗ್ಲಿ, ಎಲ್ಲೋ ಒಂದು ಕಡೆ ಸಂತೋಷವಾಗಿ ಇದ್ದುಬಿಟ್ಟಿದ್ದೀಯ ಅನ್ನೋ ಒಂದೇ ಭರವಸೇಲಿ ಉಸಿರಾಡ್ತಿದೀನಿ....ನೀನು ಎಲ್ಲೇ ಇದ್ದರೂ ಅಲ್ಲಿರುವುದೆಲ್ಲ ನಿನ್ನ ಪ್ರೀತಿಯ ಬೆಳಗಿನಿಂದ ಫಳಫಳಿಸಲಿ .

ಈಗ ತಾನೇ ಹುಟ್ಟಿ, ಅಮ್ಮನ ಎದೆ ಹಾಲು ಕುಡಿದು ತೃಪ್ತಿಯಿಂದ, ನಿಶ್ಚಿಂತೆಯಿಂದ ಮಲಗಿದ ಮಗುವಿಗಿರುವಂಥ ನೆಮ್ಮದಿ ನಿನ್ನ ಬಾಳಿಗಿರಲಿ .
ಮಗುವಾಗಿಯೇ ಉಳಿದುಬಿಡು ನೀನು ಬೆಳೆಯುವುದೇ ಬೇಡ, ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.