02 May, 2020

ಪ್ರಾರ್ಥನೆ

ಒಡಲಿನೊಡಲ  ಗಾಳಿ ಬಸಿದು,
ಎದೆಯಗೂಡ ಜಗ್ಗಿ ಹಿಸಿದು,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.

ಅಂತರಂಗದಂತರಂಗ ನೋವತಾಳದೇನೆ ಕುಸಿದು,
ಮನದಪದರದೊಳಗಿನಲರು ಶಾಂತಿಕಾಣದೇನೆ  ಮೊರೆದು,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.

ಮೆದುಳಿನಳಲ ಕಲಕಿ ಎಸೆದು,
ಜೀವದಾತ್ಮ ಬಿರಿದು ಬಸಿದು,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.

ಆತ್ಮ ದೇಹ ತೊರೆದು ಹೊರಳಿ,
ಪಂಚಭೂತ ಮರಳಿ ಕೆರಳಿ,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.

09 March, 2010

ಯಾರಿಗೆ ಬೇಕು?

ತಾನೇ ಮಳೆಯಾಗುವ ಬಗೆ ಯಾರಿಗೆ ಬೇಕು?
ಮಳೆ ತರಿಸುವ ರೀತಿ ತಿಳಿಸಿಕೊಡಿ.
ಜೀವದಾಯಿನಿ ನದಿಗೆ ತುಂಬ ಬೇಕಿದೆ ಜೀವ...
ಒಣಗಿದ ಭುವಿಯೆದೆಗೆ ನೀಡೆ ತ್ಯಾವ,
ಅನ್ನದಾತನ ಕಣ್ಣೇರ ಅಳಿಸಬೇಕಿದೆ ನನಗೆ,
ಮಳೆ ತರಿಸುವ ರೀತಿ ಕಲಿಸಿ ಕೊಡಿ.

ಕನಸು ಬೀಳುವುದು ಯಾರಿಗೆ ಬೇಕು?
ಕನಸು ಕಾಣುವುದು ತಿಳಿಸಿ ಕೊಡಿ.....
ಹಿಂದಿನದು ಮುಂದಿನದು ಎಲ್ಲ ಬಂದು....
ತನ್ನದು ,ಪರರದು ಎಲ್ಲ ಎದುರು ನಿಂದು....
ಅಚ್ಚರಿ,ಆತಂಕ, ಆನಂದ ಇತ್ಯಾದಿ....ಯಾರಿಗೆ ಬೇಕು?
ಕನಸು ಕಾಣುವುದ ತಿಳಿಸಿ ಕೊಡಿ....
ಪಸೆ ಆರಿ ಬರಡೆದ್ದ ಮರಳುಮಣ್ಣಿನ ಮೇಲೆ ಸುರಿಯಬೇಕು ಮಂಜು ಮಳೆ ...
ಭಾವ ಕಾಣದೆ ಒಣಗಿದ ಗೀತ ಸಾಲಿನ ನಡುವೆ ನಗಬೇಕು ಹೊಸ ಗುಲಾಬಿ ಹೂವು
ಕನಸು ಕಾಣುವುದ ಕಲಿಸಿ ಕೊಡಿ.....

ತಾನೇ ಪ್ರೀತಿ ಮೂಡುವ ಬಗೆ ಯಾರಿಗೆ ಬೇಕು?
ಪ್ರೀತಿ ಮಾಡುವುದ ತಿಳಿಸಿಕೊಡಿ.....
ಪ್ರೀತಿ ಹುಟ್ಟುವ ಕ್ಷಣ, ಆಕ್ಷಣದ ಸಂಭ್ರಮ,ಕಾತರ, ಉಮ್ಮಳಿಕೆ ಯಾರಿಗೆ ಬೇಕು?
ಆ ಮೋಹ,ಅನುರಾಗ, ಆವೇಗ,ಉಬ್ಬರ...ಯಾರಿಗೆ ಬೇಕು?
ಪ್ರೀತಿ ಮಾಡುವುದ ತಿಳಿಸಿಕೊಡಿ.....
ಹಿಡಿ ಪ್ರೀತಿಗೆ ಹಂಬಲಿಸೋ ಜೀವಗಳನ್ನ ಮೃದುವಾಗಿ ತಬ್ಬಬೇಕಿದೆ,
ಮುಗಿಲತ್ತ ಮುಖ ಮಾಡಿದ ಕಣ್ಣುಗಳನ್ನ ಚುಂಬಿಸಿ ಹಗುರಾಗಿಸಬೇಕಿದೆ,
ಬಂದೂಕು ಹಿಡಿದು ಶಾಂತಿ ಹುಡುಕುವ ಎದೆಗಳಲ್ಲಿ ನೆದಬೇಕಿದೆ ಪಾರಿಜಾತದ ಸಸಿ.
ಧರ್ಮ ಜಾತಿಯ ಹೆಸರಲ್ಲಿ ಮನಕಲಕುವ ಮೌಡ್ಯಕ್ಕೆ ತೋರಬೇಕು ಪ್ರೀತಿ ಜೇನಿನ ರುಚಿ.
ಬದುಕು ಬದಲಾಗಲು ಏನೇನೆಲ್ಲಾ ಬೇಕು? ಪ್ರೀತಿ ಸಾಕು.
ಪ್ರೀತಿ ಮಾಡುವುದ ಕಲಿಸಿ ಕೊಡಿ.

21 August, 2009

ಮೂಲದ ಬೆಳಕಿನಲಿ.....

ಭಾವಗೀತೆಗಳನ್ನ ಹಾಡ್ತಾ ಮತ್ತೆ ಮತ್ತೆ ಅವನದೇ ನೆನಪಾಗ್ತಾ ಇತ್ತು ...."ಪ್ರತಿಯೊಂದು ಪದವನ್ನ ಅನುಭವಿಸಿ ಹಾಡುತ್ತೀಯಲ್ಲಕ್ಕಾ...you are simply great....ನಿನ್ನ ಪಾದದ xerox copy ಕೊಡು..enlarge ಮಾಡ್ಸಿ ಮನೆ ಗೋಡೆಗಳಿಗೆ ಹಾಕಿಬಿಡ್ತೀನಿ ಪ್ರತಿ ದಿನ ನಮಸ್ಕಾರ ಮಾಡೋಕೆ ಅನುಕೂಲ "....ಅಂತ ತಮಷೆ ಮಾಡುತ್ತಲೇ ಮನಸಾರೆ ಹೂಗಳ್ತಿದ್ದ ಅವನು.ನಿಜಕ್ಕೂ ಅನುಭವಿಸಿ ಹಾಡುತ್ತೇನ ?? ಅನುಭವಿಸೋದು ಅಂದ್ರೆ ಪದಗಳ್ನ ಅರ್ಥಮಾಡ್ಕೊಳ್ಲೋದ......ಅಥವಾ ಹಾಡಿನ ಭಾವದಲ್ಲಿ ಕರಗಿ ಹೋಗೋದ???.....ಉತ್ತರ ಅಸ್ಪಷ್ಟ.

ಆ ಹಾಡೆಂದರೆ ಅವ್ನಿಗೆ ಯಾವಾಗಲೂ ಪ್ರಾಣ....ಅದೆಷ್ಟು ಸಲ ಮತ್ತೆ ಮತ್ತೆ ನನ್ನಿಂದ ಆ ಹಾಡು ಹಾಡಿಸ್ತಿದ್ದ......"ಮಣ್ಣಿನಾಳಗಲ್ಲಿ ಕಣ್ಣನೂರಿದ ಜೀವ.....ಅನ್ನದ ಹುಡುಕಾಟ ಇನ್ನು ಸಾಕು....ನಿನ್ನೊಳಗೆ ನೀನಿನ್ನು ಮುಳುಗಬೇಕು....ನುಡಿಮೆಟ್ಟಿ ಅರ್ಥದಲಿ ಏಳಬೇಕು..".....

ತಪ್ಪಾಗಿದ್ದು ಅಲ್ಲೇ.....ಪದಗಳ ಅರ್ಥ ಗಮನಿಸಿ ಭಾವ ತುಂಬಿ ಹಾಡುವ ನನ್ನ ಪ್ರತಿಭೆಯನ್ನ, ಪದಗಳನ್ನೆಲ್ಲ ಅರಗಿಸಿಕೊಂಡು ಮೂಡಿದ ಪ್ರಭುದ್ದತೆ ಅಂತ ಭಾವಿಸಿಬಿಟ್ಟ. ನನಗಾದರೂ ಏನಾಗಿತ್ತು??........ಮಾನಸಿಕವಾಗಿ ನೊಂದಿರುವನ್ಥವರು , ಬುಧ್ಧಿಯನ್ನಉಪಯೋಗಿಸೋಕೆ ಸ್ವಲ್ಪ ಕಷ್ಟ ಪಡ್ತಾ ಇರೋರು ಯಾರದ್ರೂ ಬಂದು ಏನಾದರೂ ಸಲಹೆ ಕೇಳಿದಾಗ, ಅತಿ ಸೂಕ್ಷ್ಮವಾಗಿಯಾದರೂ ನಮ್ಮಲ್ಲಿ ಒಂದು ರೀತಿಯ ಅಹಂಕಾರ ಜಾಗೃತಗೊಂಡು ಬಿಡುತ್ತೆ. ಆ ಒಂದು ಕ್ಷಣ ನಾವು ಅವರಿಗಿಂತ ಹೆಚ್ಚು ಅಂದುಕೊಂಡೆ ಒಂಥರಾ ಉಪದೇಶ ಕೊಡೋಕೆ ಶುರು ಮಾಡ್ಬಿಡ್ತೀವಲ್ಲವ? ಅವತ್ತು ನಾನು ಮಾಡಿದ್ದು ಅದೇನಾ??.......

Especially ಆ ಹಾಡಿನ ಈ ಸಾಲುಗಳು ..."ಕಾಮನ ಬಿಲ್ಲಿನ ಬಣ್ಣ ಸೆಳೆದ ಕಣ್ಣ ಬೆರಗನ್ನು ತಿಳಿವಿನಲಿ ತೊಳೆಯಬೇಕು..... ಬಣ್ಣ ಬಣ್ಣವ ತೂರಿ ಹರಿಯಬೇಕು....ಹರಿದು, ಮೂಲದ ಬೆಳಕಿನಲಿ ಮೀಯಬೇಕು...".....ಲೆಕ್ಕವಿಲ್ಲದಷ್ಟು ಸಾರಿ ಚರ್ಚೆಮಾಡಿದ್ದ್ವಿ ಆ ಸಾಲುಗಳ ಬಗ್ಗೆ. ' ಅಕ್ಕ ನಿಮ್ಮ ಹಾಡಿನ ಈ ಸಾಲು ಎಲ್ಲಿಗೋ ಎಳ್ಕೊಂಡು ಹೋಗುತ್ತೆ... ಕೇಳ್ತಾ ಕೇಳ್ತಾ ಒಂಥರಾ ಧ್ಯಾನಸ್ಥ ಸ್ಥಿತಿಗೆ ಕರೆದುಕೊಂಡು ಹೋಗ್ಬಿಡುತ್ತೆ......ಕಾಮನ ಬಿಲ್ಲಿನ ಬಣ್ಣದಿಂದ ಸೆಳೆಯಲ್ಪತ್ತು ಉಂಟಾದ ಬೆರಗನ್ನ...ತಿಳಿವಿನಿಂದ ತೊಳೆಯಬೇಕು, ಬಣ್ಣ ಬಣ್ಣವ ತೂರಿ ಹರಿದು ಮೂಲದ ಬೆಳಕಿನಲಿ ಮೀಯಬೇಕು....waaw amazing....simply superb ಅಕ್ಕ '...ಅವನ ಹೊಗಳಿಕೆಗೆ ಮಿತಿಯೇ ಇರುತ್ತಿರಲಿಲ್ಲ .ಅಂತ ಹೊಗಳಿಕೆಗಳು..ನನ್ನ ತಿಳಿವಿಗೆ ಮಂಕುಬೂದಿ ಎರಚಿದವೇ? ಎಲ್ಲಾ ಗೊತ್ತಿದ್ದೂ...ಅವನ ಹಿರಿಯರ ದೃಷ್ಟಿಯಲ್ಲಿ ಒಳ್ಳೆಯವಳಾಗಿ ಉಳಿದುಕೊಳ್ಳೋದು ನನ್ನ ಅರಿವಿಗೆ ತೆರೆ ಎಳೆಯುವಷ್ಟು ಪ್ರಭ್ಲಲ ವಾಂಛೆ ಆಗಿಬಿಟ್ಟಿತ್ತೆ????.........ಆಗಿರಲೇ ಬೇಕು....ಇಲ್ಲದಿದ್ದರೆ ಗೊತ್ತಿದ್ದೂ ಗೊತ್ತಿದ್ದೂ ಅಂಥ ನಿರ್ಧಾರ ತಗೊಳ್ಳೋಕೆ ನಾನು ಅವನಿಗೆ ಹೇಳ್ತಾ ಇರಲಿಲ್ಲ.

ಲೇಖಕಿ, ಹಾಡುಗಾರ್ತಿ, ಸಮಾಜ ಸೇವಕಿ....ಜೊತೆಗೆ ಎಲ್ಲರಿಗೂ ಸಮಾಧಾನ ಹೇಳೋ counsellor ಅನ್ನೋ ಮಾತುಗಳು ಬೇರೆ ತಲೆಗೇರಿ ಕುಳಿತಿದ್ದವೇನೋ, ಅವ್ನು ಆವತ್ತು ಬಂದು "ಅಕ್ಕ.....ನೀವು ಆಡೋ ಪ್ರತಿಯೊಂದು ಮಾತನ್ನೂ ಯೋಚನೆ ಮಾಡಿಯೇ ಆಡ್ತೀರಿ ಅಂತ ಗೊತ್ತು...ಈ ಸಂದಿಗ್ದದಿಂದ ಕಾಪಾಡಿ"..... ಅಂತ ಕೇಳ್ದಾಗ...ನಂಗೂ ಅಹಂಕಾರ ಕಣ್ಣಿಗೆ ಬಟ್ಟೆ ಕಟ್ಟಿಬಿಟ್ಟಿತೋ ಏನೋ.


ಅರೆ..ನೋಡಬಾರದ.... ಹೇಗೆ ಮಗು ಜೊತೆ ತಾನೂ ಮಗು ಥರ ಆಡ್ತಾ ಇದಾನಲ್ಲ...ಏನೂ ಆಗೇ ಇಲ್ಲ ಅನ್ನೋ ಥರ.....!!!

******* ******** ********

ಅವ್ಳು ನಂಗೆ ಗೊತ್ತಿಲ್ಲದ ಹುಡುಗಿ ಏನಲ್ಲ....ತುಂಬಾ ಚೆಂದವಿರದಿದ್ರೂ ಬಂಗಾರದಂಥ ಮನಸ್ಸಿದೆ ಅವಳಿಗೆ. ನಾಲ್ಕು ವರ್ಷದಿಂದ ಇವನಷ್ಟೇ ನನ್ನ ಹಚ್ಹ್ಚಿಕೊಂಡಿದ್ದವಳು .ಅವತ್ತು ಇವನ ತಂದೆ ಮಾರುಕಟ್ಟೇಲಿ ಸಿಕ್ಕು ನೋಡಮ್ಮ, ನೀನಾದ್ರು ಸ್ವಲ್ಪ ಹೇಳು. ಏನೋ ಒಳ್ಳೆ ಸ್ನೇಹಿತರು ಅಂತ ಯಾವತ್ತೂ ಏನೂ ಅನ್ನಲಿಲ್ಲ ನಾವು, ಇವತ್ತು ನೋಡಿದ್ರೆ ಅವಳನ್ನ ಮಾಡುವೆ ಆಗ್ತೀನಿ ಅಂತಾನೆ , ಜಾತಿ ಅಲ್ಲ ಕುಲ ಅಲ್ಲ ..ಒಳ್ಳೆ ಹುಡುಗ ಇದೊಂದರಲ್ಲಿ ಹೀಗೆ ಮಾಡ್ತಿದಾನೆ ಸ್ವಲ್ಪ ಬುಧ್ಧಿ ಹೇಳು ಅಂದಿದ್ದಷ್ಟೇ ಕೊನೆ. ನನ್ನ ಮಾತುಗಳು ಅವರಿಗೆ ಬದಲಾದ ಕಾಲ ಘಟ್ಟದ ಬಗ್ಗೆ ವಿವರಿಸೋಕಾಗ್ಲಿ, ಇವರಿಬ್ಬರ ಹೊಂದಾಣಿಕೆ ಚೆಂದದ ಪ್ರೀತಿ ಬಗ್ಗೆ ತಿಳಿ ಹೇಳೋಕಾಗ್ಲಿ ಉಪಯೋಗಕ್ಕೆ ಬರ್ಲಿಲ್ಲ.....ಅಥವಾ ನಾನು ಪ್ರಯತ್ನ ಮಾಡಲೇ ಇಲ್ಲವೇನೋ...ಅದೇ ಇವ್ನು ಬಂದು ಕೇಳ್ದಾಗ ಮಾತ್ರ ಭಾಷಣ ಶುರು ಮಾಡಿಬಿಟ್ಟೆ......." ಯಾರಿಗೋ ಗೊತ್ತಿಲ್ಲದವರಿಗೆ....ದಾರೀಲಿ ಆಟ ಆಡುವಾಗ ಜಾರಿಬೀಳೋ ಮಗುಗೆ...ಟಿವಿ ಲಿ ಎಲ್ಲೋ ಏನೋ ಆಗಿ ಸಂಕಟ ಪಡ್ತಿರೋ ಮನುಷ್ಯರನ್ನ ನೋಡಿದರೆ ನಿಂಗೆ ನೋವಾಗುತ್ತೆ...ಅಷ್ಟು ಮೃದು ಮನಸಿನ ಹುಡುಗ ನೀನು , ಹೆತ್ತೋರಿಗೆ ನೋವಾದರೆ ಸಹಿಸ್ತೀಯ ಅಪ್ಪಿ? " ........

ಹಾಗನ್ನುತ್ತಲೇ ಸುಮ್ಮನೆ ನನ್ನ ಕಡೆ ನೋಡಿದ....ಪಾರ್ಕಿನಲ್ಲಿ ಹೂವು ಕಿತ್ತ ಮಗೂಗೆ ಯಾರದ್ರೂ ಜೋರು ಮಾಡಿದ್ರೆ...ಅವರೆಡೆಗೆ ಅದು ನೋಡೋ ಖೇದ, ಆಶ್ಚರ್ಯ, ಅನಿರೀಕ್ಷಿತ ಆಘಾತ ಎಲ್ಲ ಇತ್ತು ಆ ನೋಟದಲ್ಲಿ.ಸುಧಾರಿಸಿಕೊಂಡೆನೋ ಅಥವಾ ಗಮನಿಸಲೇ ಇಲ್ಲವೊ., ನಾನು ಮುಂದುವರೆಸಿದೆ...

" ಜೀವನದಲ್ಲಿ ಇವರನ್ನ ಬಿಟ್ಟು ಬದುಕೋಕೆ ಆಗೋದೇ ಇಲ್ಲ ಅಂತ ಕೆಲವರ ಬಗ್ಗೆ ಅನಿಸುತ್ತೆ ಕಣೋ ಆದ್ರೆ ಅದೆಲ್ಲ ಸತ್ಯ ಅಲ್ಲ.....ಸಮಯದ ಬಂದೂಕಿನ ಧಾಳಿಗೆ ಎದುರಾಗಿ ನಿಂತು ಜಯಿಸುವಂಥ ಯಾವ ಶಕ್ತಿಯೂ ಜಗತ್ತಿನಲ್ಲಿ ಇಲ್ಲ.....ಇವತ್ತು ಅನಿವಾರ್ಯ ಅನ್ನಿಸೋದು ನಾಳೆ ಅಗತ್ಯದ ಮಟ್ಟಕ್ಕೆ ಇಳಿದು....ನಾಳಿದ್ದು ಅನಗತ್ಯ ಅನ್ನಿಸಿ....ಮರುದಿನ ನಿರುಪಯುಕ್ತ ಅನ್ನಿಸುವುದು ಸಹಜ ಕಣೋ. ಅದಕ್ಕೆ ಹೇಳ್ತಿದೀನಿ, ನೀವಿಬ್ಬರೂ ಎಷ್ಟು ಹೊಂದಿಕೊಂದಿದೀರಿ, ಎಷ್ಟು ಪ್ರೀತಿ ಮಾಡ್ತೀರಿ...ಎಷ್ಟು ಪಕ್ವ ಮನಸ್ಸಿನ ಪ್ರೇಮ ನಿಮ್ಮಿಬ್ಬರದು ಅಂತ ಗೊತ್ತಿದ್ದೂ ಹೇಳ್ತಿದೀನಿ ಅಮ್ಮನ ಅಪ್ಪನ ಮನಸು ನೋಯಿಸಬೇಡ ಕಣೋ.....ಅವ್ಳು ಚಿನ್ನದಂಥ ಹುಡುಗಿ....ಯಾರಾದ್ರೂ ಒಳ್ಳೆ ಹುಡುಗನ್ನ ಮಾಡುವೆ ಆಗಿ ಸಂತೋಷವಾಗಿರ್ತಾಳೆ. ನೀನು ಅಪ್ಪ ಅಮ್ಮಗೆ ಇಷ್ಟ ಆಗೊಳನ್ನ ಮಾಡುವೆ ಆಗಿ ಚೆಂದಾಗಿ ಬದುಕು ಹುಡುಗ...ಅರ್ಥ ಆಗ್ತಿದ್ಯ ನನ್ನ ಮಾತು? "..........

******* ******** ********

ಅವತ್ತು ಅವ್ನು ಹೋದ ಒಂದು ವಾರಕ್ಕೆ ಅವಳೇ phone ಮಾಡಿದ್ಲು...

"ಅಕ್ಕ ನಮ್ಮಿಬ್ಬರಲ್ಲಿ ಯಾವತ್ತೂ ಒಂದು ಚಿಕ್ಕ ಅಸಮಾಧಾನ ಕೂಡ ಬಂದಿಲ್ಲ....ಜಗಳ ಅಂತೂ ಇಲ್ಲವೇ ಇಲ್ಲ...ಒಮ್ಮೆ ಕೂಡ ತಮಾಷೆಗೂ ನನ್ನ ನೋಯಿಸಿರ್ಲಿಲ್ಲ ಅವ್ನು....ಈಗ ಇದ್ದಕ್ಕಿದ್ದಂತೆ ದೂರ ಆಗ್ತಿದೀವಿ ಅಂದ್ರೆ ಎಷ್ಟು ಸಂಕಟ ಆಗಿರಬೇಕು ಅವ್ನಿಗೆ...ಯಾಕೆ ಅಂತಾನೂ ಕೇಳೋಕಾಗ್ಲಿಲ್ಲ ನನ್ನಿಂದ. ಅವ್ನು ನನ್ನ ಮದುವೆಯಾಗಿ ನಾವಿಬ್ಬರೂ ಸಂತೋಷವಾಗಿ ಬದುಕೋದಕ್ಕಿಂತ...ಅವ್ನು ಯಾವ ಕಾರಣಕ್ಕೆ ಮದುವೆ ಬೇಡ ಅಂದನೋ ಆ ವ್ಯಥೆಯಿಂದ ಅವ್ನು ಪೂರ್ತಿ ಪಾರಾಗಿ ನಿರಾಳವಾಗಿ ಉಸಿರಾಡುವಂತಾದ್ರೆ ಸಾಕು.ಆದ್ರೆ ಮದುವೆಯಾಗದೆ ಹಾಗೆ ಇರ್ತೀನಿ ಅಂತ ಹಠ ಮಾಡಿ ಈಗಾಗಲೇ ನೊಂದಿರೋ ಅಪ್ಪ ಅಮ್ಮಗೆ ಇನ್ನಷ್ಟು ನೋಯಿಸೋ ಶಕ್ತಿ ಹಾಗೂ ಹುಡುಗಿಯಾಗಿ ನಂಗೆ ಈ ವಿಷಯದಲ್ಲಿ ಅವ್ನಿಗೆ ಇರುವಷ್ಟು ನಿರ್ಧಾರ ತಗೊಳ್ಳೋ ಸ್ವಾತಂತ್ಯ್ರ ಎರಡೂ ಇಲ್ಲ. ಮೊನ್ನೆ ಅಪ್ಪ ಕರ್ಕೊಂಡು ಬಂದಿದ್ದ ಒಬ್ಬರ ಜೊತೆ ನಿಶ್ಚಿತಾರ್ಥ ಆಯ್ತು ".

******* ******** ********

ಅವತ್ತು ಹೋದವನು ಇವತ್ತು ಬಂದಿದಾನೆ ಕಡಿಮೆ ಏನಲ್ಲ ಒಂದು ವರ್ಷದ ನಂತರ...........

ತಡಿಯೋಕಾಗ್ತಿಲ್ಲ ಕೇಳೇ ಬಿಡ್ತೀನಿ...

"....ಅವತ್ತು ನಾನು ಹಾಗೆ ಹೇಳಬಾರದಿತ್ತು ಅನ್ನಿಸುತ್ತೆ ಕಣೋ....ನನ್ನಿಂದಾ ನೀವಿಬ್ಬರೂ ಇಷ್ಟು ನೊಂದುಕೊಳ್ಳೋ ಹಾಗಾಯ್ತು.....ಇಷ್ಟು ದಿನ ಹೇಗಿದ್ದ್ಯೋ...ಈಗ ಹೇಗಿದೀಯೋ ಪುಟ್ಟ..."

" ಹೇ ನಾನು ಅರಾಮಿದ್ದೀನಕ್ಕ......ತುಂಬಾನೇ ತಣ್ಣಗೆ....ಚೆನ್ನಾಗಿದ್ದೀನಿ.."

" ನಿಜ ಹೇಳು ಸುಮ್ಮನೆ ನನ್ನ ಸಮಾಧಾನಕ್ಕೆ ಮಾತಾಡಬೇಡ...."

" ನಿಜಾನೆ ಅಕ್ಕ.......ನೋಡೂ ..... ಎಂಥ ಸಂಧರ್ಬಗಳಲ್ಲೂ ಸಹಜವಾಗಿರ್ಬೇ ಕಂದ್ರೆ ..ಕೆಲವು ಸಣ್ಣ ಸಣ್ಣ ಅಭ್ಯಾಸಗಳು ಬೇಕಾಗುತ್ತವೆ....infact ಅಭ್ಯಾಸಗಳಿಂದಲೇ ಕಲ್ತುಕೋಬೇಕು ಅವನ್ನ. ಗೊತ್ತಿರ್ಲಿಲ್ಲ ನಂಗೂ ಇವೆಲ್ಲ ಉಪಯೋಗಕ್ಕೆ ಬರುತ್ತವೆ ಅಂತ ಆದ್ರೆ ಈಗ ಗೊತ್ತಾಗ್ತಿದೆ ಅಂಥ ಅಭ್ಯಾಸಗಳ ಶಕ್ತಿ ಏನು ಅಂತ....ಬಸ್ನಲ್ಲಿ ಗೆಳೆಯರೆಲ್ಲ ಒಟ್ಟಿಗೆ ಕೂತುಕೊಬೇಕು ಅಂತ ಓದಿ ಹೋಗಿ ಸೀಟ್ ಹಿಡಿದಿರ್ತೀಯ.....ಆದ್ರೆ ಕೊನೆಗೆ ಸ್ವಲ್ಪ ಹೆಚ್ಚು ವಯಸ್ಸಾದವರು ಒಬ್ಬರು ಬಂದು ಮುಂದೆ ನಿಲ್ತಾರೆ , ನೀನು ಜಾಗ ಬಿಟ್ಟು ಕೊಡ್ತೀಯ.ಗೆಳೆಯರೊಟ್ಟಿಗೆ ಕೂರೋ ಖುಷಿನ ಆ ಕ್ಷಣದಲ್ಲಿ ಸುಮ್ಮನೆ ಕೊಂದು ಬಿಡ್ಬೇಕು....ಇದೊಂದು ಚಿಕ್ಕ ಉದಾಹರಣೆ ಅಷ್ಟೇ.ಅಗಾಗ ಇಂಥ ಚಿಕ್ಕ ಸಂತೋಷಗಳನ್ನ ಕೊಲ್ತಾ ಇರ್ಬೇಕು....ಸಾಯಿಸ್ತ ಇರ್ಬೇಕು....

ತ್ಯಾಗ ಅನ್ನೋ ಪದ ಇಲ್ಲಿ ಬೇಡ...ಬಿಡೋದಂದ್ರೆ ಸುಮ್ಮನೆ ಬಿಡೋದಕ್ಕ....ಏನೋ ಕೆಲಸ ಮಾಡುವಾಗ ಜೋರಾಗಿ ಕಚ್ಚಿ ಎಗ್ಗಿಲ್ಲದೆ ರಕ್ತ ಹೀರುತ್ತ್ತಿರೋ ಸೊಳ್ಳೆ ನೋಡಿದಾಗ ಅದನ್ನ ಹೊಡೆಯದೆ ಒಮ್ಮೊಮ್ಮೆ ...ಉಫ್ಫ್ಫ್ ಅಂತ ಊದಿ ಓಡಿಸಿ ಬಿಟ್ಟ್ಟಾಕ್ತೀವಲ್ಲವ ಹಾಗೆ....ಒಂದು ಚಿಕ್ಕ ಪ್ರತಿಕ್ರಿಯೆಯೂ ಇಲ್ಲದಂತೆ....ಒಳ್ಳೆ ಬಟ್ಟೆ ತಗೋಬೇಕು ಅನ್ನಿಸ್ದಾಗ ಜೇಬಲ್ಲಿ ದುಡ್ಡು ಇದ್ದರೂ ಸಹ...ಅದು ಬೇಡ ಇದೇ ಸಾಕು ಅಂತ ಕಡಿಮೆ ಬೆಲೆಯಾ ಬಟ್ಟೆ ತರುವಂತೆ...ಸುಮ್ಮನೆ ಕೊಲ್ಲಬೇಕು ಚಿಕ್ಕ ಚಿಕ್ಕ ಅಸೆಗಳನ್ನ ....ದೊಡ್ಡ ದೊಡ್ಡ ಕಷ್ಟಗಳನ್ನ ಗೆಲ್ಲೋ ಶಕ್ತಿ ಬರುತ್ತಕ್ಕ್ಕಾ ...ಗೆಲ್ಲೋ ಪ್ರಶ್ನೇನೆ ಇಲ್ಲ..ನಿರಾಸೆಯನ್ನೇ ಹಿಂದಿನ ದಿನದ ಬಟ್ಟೆ ಕಳಚುವಂತೆ ಕಳಚಿ ಎಸೆದುಬಿಡಬಹುದು .

ಇದು JK ಅನ್ನೋ ಮಹಾನ್ ಚಿಂತಕ ತೋರಿದ ದಾರಿ..ಅವರು ಹೇಳೋ ಥರ ವಾಂಛೆಗಳನ್ನ ಸುಮ್ಮನೆ ಬಿಟ್ಟುಬಿಡೋದು ಅಥವಾ ಸತ್ತುಬಿದೋ ಉಪಾಯ ಗೊತ್ತಿರಲಿಲ್ಲ ಮೊದ್ಲು, ಆದ್ರೆ ಚಿಕ್ಕ ಚಿಕ್ಕ ಸಂತೋಷಗಳನ್ನ ಬಿಟ್ಟು ಕೊಟ್ಟು ಅಭ್ಯಾಸ ಇತ್ತು. ಏನಾದ್ರೋ ಕೊಡುವಾಗ ಸಿಗೋ ಖುಷಿ ಅದನ್ನ ಹೋರಾಡಿ ಇಟ್ಟುಕೊಳ್ಳೊದರಲ್ಲಿ ಇಲ್ಲ ಅಂತ ಸುಮಾರು ಸಾರಿ ಅನ್ನಿಸ್ತಿತ್ತು.ಪುಟ್ಟ ಪುಟ್ಟ ಸತ್ತುಹೋಗುಗುವಿಕೆಗಳು ಎಂಥ ನೆನಪನ್ನಾದ್ರೂ ಅಳಿಸಿ ಹಾಕೋ ಶಕ್ತಿ ಕೊಡ್ತಾವೆ....ಎಂಥ ನೋವುಗಳನ್ನಾದ್ರೂ ಕಳಚಿ ಎಸೆಯಬಹುದಾದ ಧ್ರುಡತೆ ತಂದು ಕೊಡ್ತಾವೆ. ಇಂಥದ್ದಕ್ಕೆಲ್ಲ ಎಳೆಯ ಮನಸ್ಸು ಬೇಕು ಅಂತಾರೆ JK. ಎಳೆಯಮಸ್ಸು ಮಾತ್ರ ಯಾವಾಗ ಬೇಕಾದ್ರೂ ಸ್ವಇಚ್ಚೆಯಿಂದ ಸಾಯೋದಕ್ಕೆ....ಸುಮ್ಮನೆ ಬಿಟ್ಟು ಬಿಡೋದಕ್ಕೆ ಸಿಧ್ಧವಾಗಿರುತ್ತದಂತೆ....ಕಲಿತದ್ದನ್ನ ಬಿಟ್ಟು ಕೊಡೋದು ಅದಕ್ಕೆ ಮಾತ್ರ ಸಾಧ್ಯ ಅಂತೆ.ಹಾಗೇ ಅಕ್ಕ....ನೋಡೀಗ ಸುಮ್ಮನೆ ಸತ್ತುಹೊಗಿದ್ದೀನಿ ....simply given up everything......ಸುಮ್ಮನೆ ...
...ಹ್ಮ್ಮ್ಮ್ ತಾಯಿ ಹೊಟ್ಟೆ ತಾಳ ಹಾಕ್ತಿದೇ ........ತಲೆ ಕೆಡಿಸ್ಕೊಳ್ಳೋದು ಬಿಟ್ಟು ಬೇಗ ಬೇಗ ಏನಾದ್ರು ಮಾಡಿಕೊಟ್ಟರೆ ಮಹಾ ಪ್ರಸಾದ ಅಂತ ತಿಂದು ಕೃತಾರ್ಥ ರಾಗುತ್ತೇವೆ :-) ....".

ಅವ್ನತಲೆಗೊಂದು ಮೊಟಕಿ....ಅವನಿಗಿಷ್ಟವಾದ ಹೆಸರುಬೇಳೆ ಪಾಯಸ ಮಾಡೋಕೆ ಹೊರಟೆ...............

ಇವ್ನು ಹೇಳ್ತಿರೋದೆಲ್ಲ ನಿಜಾನ...ನಿಜಕ್ಕೂ ಅವ್ನು ಹೇಳ್ಕೋತ ಇರೋ ಥರ ಅಷ್ಟೊಂದು ತಣ್ಣಗೆ ಇದ್ದುಬಿಟ್ಟಿದಾನ ? ಈ ಇಬ್ಬರು ಹುಡುಗರ ಮುಂದೆ ನಾನು ತುಂಬಾ ಕುಬ್ಜಳಾಗಿಬಿಟ್ಟೆ ಅನ್ನಿಸ್ತಿದೆ...ಪ್ರೀತಿ ಸ್ಪುರಿಸುವ ಪದ್ಯಕ್ಕೆ ರಾಗ ಹಾಕಿ....ಭಾವದ ಆಳ ತಲುಪಿ ಜೀವ ರಸ ಹೊಮ್ಮಿಸುವುದಕ್ಕೂ.....ವಾಸ್ತವದಲ್ಲಿ ಪ್ರೀತಿಯನ್ನ ಅರಿತು ನಿರ್ಧಾರಗಳನ್ನ ತಗೊಳ್ಲೋದಕ್ಕೂ ಎಷ್ಟೊಂದು ವ್ಯತ್ಯಾಸ...atleast ಇವರಿಬ್ಬರಂತೆ ಬದುಕನ್ನಾದ್ರೂ ಪ್ರೀತಿಸೋದು ಕಲ್ತಿದೀನ ನಾನು? ಇವರಿಗಿರುವಷ್ಟು ಬದುಕಿನೆಡೆಗೆ ನೋಡುವ ಪ್ರೌಢತೆ ಆದರೂ ಇದೆಯಾ ನನಗೆ?........ಮತ್ತೆ ಉತ್ತರ ಅಸ್ಪಷ್ಟ.

..............ಚೆನ್ನಾಗಿ ಗೋಡಂಬಿ ಹಾಕಿದ ಪಾಯಸ ಅವನಿಗಿಷ್ಟ....ಇಲ್ಲಿ ಎಲ್ಲೋ ಇಟ್ಟಿದ್ನಲ್ಲ ಗೋಡಂಬಿ ಡಬ್ಬ.....ಇಟ್ಟಿದ್ದು ಯಾಕೆ ಒಂದು ಕಡೆ ಇರೋಲ್ಲ ಇಲ್ಲಿ....ನಾನೆ ಓಡಾಡೋ ಅಡುಗೆ ಮನೇಲಿ.....................

******* ******** ********

16 April, 2009

ಮನಸಿನ ಕತ್ತಲೆಯನ್ನ ಬೆಳಗಾಗಿಸೆ.......????

ಇವತ್ತು ಬೆಳ್ಳಂಬೆಳಿಗ್ಗೆ bus standiನಲ್ಲಿ ತನ್ನ ಅಮ್ಮನ ಸೊಂಟದಲ್ಲಿ ಕುಳಿತಿದ್ದ ಮಗುವೊಂದು ಇದ್ದಕ್ಕಿದ್ದಂತೆ ನನ್ನ ನೋಡಿ ಮುಗುಳ್ನಕ್ಕಿತು ..ನಾನೂ ನಕ್ಕು ಅದರ ಕೆನ್ನೆಯನ್ನ ನಯವಾಗಿ ಸವರಿ, ಹಣೆಗೊಂದು ಹೂಮುತ್ತು ಕೊಟ್ಟು ಬಸ್ಸ್ಸು ಹತ್ತಿ ಕುಳಿತೆ....

******* ******** *********

Magical..simply magical.....ಬೇರೆ ಪದಗಳೇ ಸಿಗ್ತಿಲ್ಲ ಅದನ್ನ ಹೇಳೋಕೆ . ಸುಂದರವಾಗಿದೆ , cute ಆಗಿದೆ , ಅಧ್ಭುತವಾಗಿದೆ ....ಊ ಹೂ ಅದು ನಮ್ಮ ಮೇಲೆ ಉಂಟು ಮಾಡೋ ಪರಿಣಾಮಗಳನ್ನ ಗಮನಿಸಿದರೆ magical ಅನ್ನೋ ಪದವೇ ಸೂಕ್ತ ಅನ್ನಿಸುತ್ತೆ . ಮಕ್ಕಳ ನಗುವೇ ಹಾಗೆ , ಮಗುವಿನ ನಗುವಿನಂಥಾ ನಗುವೇ ಹಾಗೆ ....ಎಂಥ ತಳಕ್ಕಿಳಿದ ಮನಸ್ಸಿಗಾದರೂ ಅರೆಕ್ಕ್ಷಣದ ನೆಮ್ಮದಿ , ಹೊಸ ಭರವಸೆ ಕೊಡುವಂಥ ಅವಿಚ್ಛಿನ್ನ ಶಕ್ತಿ ಅದು . ಹಲವು ಥರದ ಸಂಕಟ ,ಉದ್ವೇಗ , ಆತಂಕ , ವ್ಯಸನ ಏನೇ ಇರಲಿ ...ಒಮ್ಮೆ ಆ ಮುಗುಳ್ನಗೆ ನೋಡಿದರೆ ....ಇದ್ದಕ್ಕಿದ್ದಂತೆ ಬಿಗಿದುಕೊಂಡ ನರಗಳೆಲ್ಲ ಸಡಿಲ ..ದೇಹ ಮನಸ್ಸಿನ ಕಣಕಣವೂ ಕನಿಷ್ಠ ಅರ್ಧದಷ್ಟಾದರೂ ನಿರಾಳ . ಅದರಲ್ಲೂ ಸ್ವಲ್ಪ ಹೆಚ್ಹಾಗಿಯೇ ನಕ್ಕುಬಿಟ್ಟರಂತೂ ....ಕ್ಲುಪ್ತ ಮನಸ್ಸೆಲ್ಲ ಕ್ಷಣಮಾತ್ರದಲ್ಲಿ ಪ್ರಫುಲ್ಲ.

ಹೌದು...ಅಂಥಾದ್ದೊ೦ದಷ್ಟು ನಗೆಯನ್ನ ಮನಸ್ಸಿನ ಜೇಬಿನಲ್ಲಿ ಮಡಿಸಿಟ್ಟುಕೊ೦ಡು ಕಾಪಾಡಿದ್ದೇನೆ ....ನಾನು ಮತ್ತು ನಾನೊಬ್ಬಳೇ ಇದ್ದಾಗ , ಬೇಸರವಾದಾಗ ನೆನಪಿನ ತೆರೆ ಸರಿಸಿದರೆ ..ಮತ್ತೆ ಹೊಸ ಉಲ್ಲಾಸ ಎಲ್ಲದಕ್ಕೂ .

ಆದರೆ ಯಾವಗಲೂ ನೆನಪಾಗೋದು ಈ ಚಂದದ ನಗೆಬೀರುವ , ಬುಧ್ಧಿಯೂ ಸೇರಿದಂತೆ ಎಲ್ಲ ಅಂಗಾಂಗಗಳೂ ಸುಸ್ಥಿತಿಯಲ್ಲಿರುವ "blessed" ಅನ್ನಬಹುದಾದ ಮಕ್ಕಳ ನಗೆಯಷ್ಟೇ ಅಲ್ಲಾ ......ಆ ಅಸಹಜ ಮಕ್ಕಳ ನಿಚ್ಚಳ ನಗೆಮಲ್ಲಿಗೆಯ ನೆನಪೂ ಧುತ್ತೆಂದು ಎರಗುತ್ತೆ . ಒಬ್ಬಳೇ ಇದ್ದಾಗ, ಕೆಲವೊಂದು ಹಾಡುಗಳನ್ನ ಕೇಳುವಾಗ , ಎಲ್ಲಿಗಾದ್ರೂ ಪಯಣಿಸುವಾಗ , ಹಸಿರು ಬೆಟ್ಟದ ತುತ್ತತುದಿಯಲ್ಲಿ ನಿಂತು ಎಷ್ಟು ಸುಂದರ ಜಗತ್ತು ಅಂತ ಖುಸಿಯಿಂದ ಮನಸ್ಸು ಕಂಪಿಸುವಾಗ , ಗೆಳೆಯರ ಜೊತೆ cofeeday ನಲ್ಲಿ ಕೂತು ಹರಟೆ ಕೊಚ್ಚುವಾಗ,...ಥಟ್ಟನೆ ಆ ನಿಷ್ಕಲ್ಮಶ ನಗು ಎದುರು ನಿಂತು ಬಿಡುತ್ತೆ. ಬುಧ್ಧಿಮಾ೦ದ್ಯ ಮಕ್ಕಳೆಂಬ ಭಗವಂತನ ಶಾಪಗ್ರಸ್ತ ಮಕ್ಕಳ ಆ ನಗುವು ಬೇರೆ ಎಲ್ಲಾ ಪುಟ್ಟ ಕಂದಮ್ಮಗಳ ನಗುವಿಗಿ೦ಥ ಮುಗ್ಧತೆಯಲ್ಲಿ, ಅಂದ ಚೆಂದಗಳಲ್ಲಿ ಕಡಿಮೆ ಅಲ್ಲವೇ ಅಲ್ಲ... ..ಆದರೆ ನನ್ಮೇಲೆ ಆ ನಗು ಬೀರುವ ಪರಿಣಾಮ ಮಾತ್ರ ಭಿನ್ನ . ಸಹಜವಾದ ಮಕ್ಕಳ ನಗು ನಮ್ಮ ಒಳ ಹೊರಗನ್ನೆಲ್ಲ ಹಗುರಾಗಿಸಿದರೆ, ಈ ಮಕ್ಕಳ ನಗು ಹೃದಯ ಭಾರವಾಗಿಸಿ ಒಳಗಡೆಗೆಲ್ಲೂ ಕರೆದುಕೊ೦ಡು ಹೊರಟುಬಿಡುತ್ತದೆ.



ಸಾಮಾನ್ಯವಾಗಿ ಬಯ್ದಾಟ ,ಜಗಳಗಳು,ನಿಂದನೆ ಯಾವದೂ ಈ ಥರ ನನ್ನ ಹಿಂಡುವುದಿಲ್ಲ . ಆದರೆ ಆ ಮಕ್ಕಳ ನಗು ನೆನಪಾದಾಗೆಲ್ಲಾ ಎದೆಯೊಳಗೆ ಇದ್ದಕ್ಕಿದ್ದಂತೆ ಮಂಜುಗಡ್ಡೆಯೊ೦ದು ಹುಟ್ಟಿಕೊಂಡಂತೆ , ಅದರ ಹೆಪ್ಪುಗಟ್ಟಿಸುವಿಕೆಗೆ ಎದೆಯ ಬಿಸಿ ಆರಿ ಒಳಗೋಡೆಗಳೆಲ್ಲ ತನ್ನಷ್ಟಕ್ಕೇ ಸಂಕುಚಿಸಿದಂತೆ ಅನ್ನಿಸಿಬಿಡುತ್ತೆ. ಒಂದು ದಪ್ಪನೆಯ ಕಂಬಳಿ ಹೊದ್ದುಕೊಂಡು ಯಾರಿಗೂ ಕಾಣದಂತೆ ಅಣುವಿನಷ್ಟು ಸಣ್ಣಕ್ಕೆ ಮುದುರಿಕೊಂಡು ಕುಳಿತು ಬಿಡಬೇಕೆನ್ನುವ ಭಾವ.


***** ***** ******


ಬಸ್ಸಿನ Radioದಲ್ಲಿ ಬರುತ್ತಿದ್ದ ಆ ಹಾಡು ಕಿವಿಗೆ ಬಿದ್ದದ್ದೇ ಶುರುವಾಯ್ತು ಈ ಭಾವನೆಗಳ ಧಾಳಿ .

यह तो हैं सर्दी में धुप की किरने ,

उतरें जो आँगन को सुन्हेरा सा करने ,

मनन के अंधेरों को रोशन सा कर दें ,

ठिठुरती हथेली की रंगत बदल दें ,

(ಚಳಿಗಾಲದಲ್ಲಿ ಬೀಳುವ ಬಿಸಿಲಿನ ಕಿರಣಗಳಿವು,

ಅಂಗಳವನ್ನ ಚೆನ್ದವಾಗಿಸಲು ಇಳಿದು ಬಂದಿಹವು ,

ಮನಸಿನ ಕತ್ತಲೆಯನ್ನ ಬೆಳಗಾಗಿಸೆ,

ಕಂಪಿಸುವ ಕೈ ಬರಹದ ಬಣ್ಣವನ್ನೇಬದಲಾಯಿಸೆ...)

Taare Zameen par ಎಂಬ ಸಿನಿಮಾದ ಹಾಡೊಂದರ ಅದ್ಭುತ ಸಾಲುಗಳವು .. ಮತ್ತೆ ಮತ್ತೆ ನನ್ನ ಕಾಡುವ ಹಾಡದು . ಪುಸ್ತಕಗಳ ಬಗ್ಗೆ some books to taste, some to eat and some to be digested....ಅನ್ನೋ ಮಾತಿರುವಂತೆ ಈ ಹಾಡುಗಳೂ ಹೀಗೇ ಏನೋ....ಒಂದೊಂದು ಕಿವಿಮೇಲೆ ಬಿದ್ದು ಜಾರಿಹೊಗುತ್ತವೆ, ಕೆಲವು ಮನಸಿನಾಳದ ಕದ ತಟ್ಟುತ್ತವೆ, ಇನ್ನೂ ಕೆಲವು ಒಳಗಡೆಯೇ ಉಳಿದು ಹೋಗುತ್ತವೆ.
ನಂಗೆ ಈ ಸಾಲುಗಳು ಕಾಡಿ ಕಾಡಿ ಅಂಥ ನಗುವನ್ನ ನೆನಪಿಸೋದೂ, ಅಂತಹ ನಗುವಿನ ಜೊತೆ ಈ ಹಾಡು ನೆನ್ಪಾಗೋದೂ ಆಗ್ತಾನೇ ಇರುತ್ತೆ.ಪ್ರತಿಬಾರಿ ಕೇಳಿದಾಗಲೂ ಕಣ್ಣು ಮಂಜಾಗಿ ಹೋಗುತ್ತವೆ, ಅದರಲ್ಲೂ " मनन के अंधेरों को रोशन सा कर दें (ಮನಸಿನ ಕತ್ತಲೆಯನ್ನ ಬೆಳಗಾಗಿಸೆ)" ಅನ್ನೋ ಸಾಲು....ಮನಸ್ಸಿನ ಕತ್ತಲನ್ನ ಬೆಳಕಾಗಿಸೋದು ಸಾಮಾನ್ಯವಾದ ಮಾತೆ?

ಎಂಥೆಂಥ ಚಿಂತನ ಮಂಥನಗಳು, ಅಧ್ಯಾತ್ಮಿಕ ಅನುಭೂತಿಗಳು, ವ್ರತ, ತಪ, ಜಪಗಳ ಶಕ್ತಿಗೆಲ್ಲ ನಿರಂತರ ಸವಾಲಾದ ಮನಸ್ಸಿನ ಕತ್ತಲೆಯನ್ನ ಹೊಡೆದೋಡಿಸುವ ಶಕ್ತಿ ಈ ಮಕ್ಕಳಿಗಿದೆಯೆ? ಇರಬಹುದು ಅಂತಾನೆ ಪ್ರತಿ ಸಾರಿಯೂ ಅನ್ನಿಸುತ್ತಲ್ಲಾ....
ಕ್ಷುಲ್ಲಕ ಕಾರಣಗಳಿಗೆ ಮುದುಡಿ ಹೋಗುವ ಮನಸ್ಸು ಆ ಮಕ್ಕಳ ನೆನಪಾದಾಗೆಲ್ಲಾ....ಈ ಜೀವಗಳ ನೋವಿನ ಮುಂದೆ ನನ್ನದೇನು ಮಹಾ ಎಂಬ ಎಚ್ಚರಿಕೆ ತಾಳುತ್ತೆ...ನೋವಿನಲ್ಲೂ ನಕ್ಕು ನಗಿಸಿಬಿಡುವ ಅವುಗಳ ವಿಶಿಷ್ಟ ಶಕ್ತಿಗೆ ನನ್ನ ಅಹಂಕಾರ ತನ್ನಷ್ಟಕ್ಕೆ ತಾನೇ ತಲ್ಲಣಿಸಿ ಕರಗಿದಂತೆ ಅನ್ನಿಸುತ್ತದೆ. ಎಂಥಾ ಕ್ಲಿಷ್ಟ ಪ್ರಸಂಗಗಳಿಗೂ ಜಗ್ಗದ ಮೊಂಡುಬಿದ್ದ ನನ್ನ ಮನಸ್ಸು ಕೂಡ ಈ ಸಾಲುಗಳನ್ನ ಕೇಳಿದೊಡನೆ ನಲುಗಿಹೊಗುತ್ತದಲ್ಲಾ.....ನಾನೂ ಕಣ್ಣೇರಾಗುತ್ತೇನಲ್ಲ.....

Mentally challenged ಅಂತಾ ಕರೆಯಲ್ಪಡೊ ಮಕ್ಕಳು , ಅವುಗಳ ತಂದೆ ತಾಯಿಯರ ಅನುಕ್ಷಣದ ಸಂಕಟಗಳನ್ನೆಲ್ಲ ಮತ್ತೆ ಮತ್ತೆ ನೆನಪಿಗೆ ನುಗ್ಗಿಸಿ ತರುವ ಸಾಲುಗಳವು. ಹೀಗೆಲ್ಲ ಯಾಕೆ ಅನ್ನೋ ಪ್ರಶ್ನೆ ಕೇಳುವ ಕಸುವನ್ನೂ ಉಳಿಸದೆ ಮೂಕಾಗಿಸುವ ಕ್ರೌರ್ಯವಿದೆ ಆ ಮಕ್ಕಳ ಅಸ್ತಿತ್ವದಲ್ಲಿ . ಇದೆಲ್ಲ ನಿಜಕ್ಕೂ ದೇವರು ಮಾಡಿದ್ದ? ದೇವರು ಎಂಬುದೊಂದು ನಿಜಕ್ಕೋ ಇದೆಯಾ ಅನ್ನೋ ಸವಕಲು ತರ್ಕ ಇನ್ನೊಮ್ಮೆ ಶುರು .ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿರುವ, ಎಲ್ಲ ಇದ್ದೂ ಇರದ ಯಾವುದಕ್ಕೂ ತಡಕಾಡುವ ನಾವೆಲ್ಲಾ normal ಮನುಷ್ಯರಾ ? ಆ ಮಕ್ಕಳ೦ತಲ್ಲದಿದ್ದರೂ ಅನುದಿನ ಹೊಸ ಹೊಸ ವಾ೦ಛೆಗಳಲ್ಲಿ ಬದುಕುವ ನಾವೆಲ್ಲಾ ಒಂಥರಾ psychologically challenged ಮನುಷ್ಯರಲ್ಲವ?....ಅಂತೆಲ್ಲಾ ಮುಖಕ್ಕೆ ತಿವಿದು ಕೇಳಲ್ಪಡುವ ಅನುದಿನದ ಪ್ರಶ್ನೆಗಳವು. ನಾವು ಏನೂ ಮಾಡೋಕೆ ಆಗೋದೇ ಇಲ್ಲವ ಇಂಥ ವಿಷಯಗಳಲ್ಲಿ??????........


**** ***** ******


ಬಸ್ಸು ಅರೆ ಕ್ಷಣ ನಿಂತು ಮತ್ತೆ ಚಲಿಸಿದಂತೆ ಆದಾಗ ಎದುರಿಗೆ ನೋಡಿದೆ . ಕಣ್ಣು ಪಿಳುಕಿಸುತ್ತಿದ್ದ೦ತೆ ಅಡ್ಡ ನಿ೦ತಿದ್ದ ಕಂಬನಿಗಳು ರೆಪ್ಪೆಯ ಕೆಳಗೆ ಅಡಗಿಕೊಂಡು ಕಣ್ಣು ನಿಚ್ಚಳ ಗೊಂಡವು . ವಯಸ್ಸು ಹೆಚ್ಚಿದ್ದರೂ ಮನಸ್ಸು ಮಗುವಿನ ಮಟ್ಟದಿಂದ ಮೇಲೇರದ ಜೊತೆಗೆ ಕಣ್ಣೂ ಕಾಣಿಸದ ಜೀವವೊಂದು ಎದುರಿಗೆ ಬಂದು ನಿಂತಿತ್ತು ... ನಾನು ಎದ್ದು ಅವ್ರನ್ನ ಕೂರಿಸಬೇಕು 'ಅನ್ನಿಸುವಷ್ಟರಲ್ಲಿ' ಪಕ್ಕದಲ್ಲಿದ್ದ ವ್ಯಕ್ತಿ ಜಾಗ ಬಿಟ್ಟುಕೊಟ್ಟಾಗಿತ್ತು . ಪೆಚ್ಚಾದೆನೋ ಇಲ್ಲವೊ ...ಜಾಗ ಬಿಟ್ಟು ಕೊಟ್ಟವರ ಕಡೆ ನೋಡಿದೆ...ಅವರಿಗೊಂದು ಕಾಲು ಇರಲೇ ಇಲ್ಲ. ನನ್ನೆಡೆ ನೋಡಿ ಸಹಜವಾಗಿ ನಕ್ಕರು. ಬುಟ್ಟಿ ತುಂಬಾ ತುಂಬಿದ್ದ ಸೆಗಣಿಯನ್ನು ಥೊಪ್ಪೆ೦ದು ಮುಖಕ್ಕೆ ರಾಚಿದಂತೆ ಆಗಿತ್ತು . ಅದರ ವಾಸನೆಗೆ ಅಸಹ್ಯಪಟ್ಟುಕೊಳ್ಲೋ ಶಕ್ತಿಯೂ ಇಲ್ಲವೆಂಬಂಥ ಕಣ್ಗತ್ತಲು . ಹೊರಕ್ಕೆ ತುಳುಕಿದ ಕಣ್ಣೀರಿಗೆ ಒಳಗಿನ ಜಡತೆಯನ್ನು ತೊಡೆಯುವ ಶಕ್ತಿ ಇಲ್ಲವಾ? ಸ್ವತಹ ಧನಾತ್ಮಕ ಹಾಗೂ ಪರಿಣಾಮಕಾರಿಯಾದ ಕ್ರಿಯೆಯಾಗಿ ಬದಲಾಗದ ಭಾವುಕತೆ ವ್ಯರ್ಥವಲ್ಲವ?

23 March, 2009

ಹಾಗಾಗೋದು ಬೇಡ please....

ನಲ್ಮೆಯ ಗುಬ್ಬಚ್ಚಿ,
ಪ್ರತಿ ಬಾರಿ ಸಿಕ್ಕಾಗಲೂ ಏನಾದರೊಂದು ಕೀಟಲೆ, ತರಲೆ ನಿನ್ನದು . ನಿನ್ನ ಕಿಚಾಯಿಸುವಿಕೆಯ ಪ್ರತಿ ಮಾತಿನಲ್ಲೂ ತುಂಬಿದ್ದ ಗರಿ ಗರಿ ಪ್ರೀತಿ ಮುಗ್ಧತೆ.... ಓಹ್ ಆ ದಿನಗಳು ಹಾಗೆ ಸ್ಥಬ್ದವಾಗಿ ಹೋಗ್ಬಾರ್ದಿತ್ತಾ ಅನ್ನಿಸ್ತಿದೆ. ನಮಗೆ ಮಾತಾಡೋಕೆ ಯಾವಾಗಲೂ ವಿಷಯಗಳೇ ಬೇಕಾಗಿರಲಿಲ್ಲ ಅಲ್ವ? ಸುಮ್ಮನೆ ಒಂದೆಡೆ ಸೇರಿದ್ರೆ ಸಾಕು ಅದೆಲ್ಲಿಂದ ವಿಷಯಗಳು ಬರ್ತಿದ್ದವೋ ...ಜಿದ್ದಿಗೆ ಬಿದ್ದವರಂತೆ ಒಬ್ಬರಿಗೊಬ್ಬರು ಏನಾದರೊಂದು ಹೇಳ್ತಾ ಇರ್ತಿದ್ವಿ, ಹ೦ಚಿಕೊಳ್ತಾನೆ ಇರ್ತಿದ್ವಿ, ನಿನ್ನ ರೇಗಿಸೋದ್ರಲ್ಲಿ ನಂಗೆ ಎ೦ಥಾದ್ದೋ ಆನಂದ....ನೀನೇನು ಕಮ್ಮಿ ನನ್ನನ್ನ ಗೊಳಾಡಿಸೋದೆ ಮುಖ್ಯ ಉದ್ಯೋಗವಾಗಿತ್ತ್ತು ನಿಂಗೆ .
ನಾವು ಒಟ್ಟಾಗಿ , ಇಬ್ಬರ ಮನಸ್ಸೂ ಒಂದೇ ಅನ್ನುವಂತೆ ಇನ್ನೊಂದರ ಬಗ್ಗೆ , ಇನ್ನೊಬ್ಬರ ಬಗ್ಗೆ ಮಾಡಿದ ತಿಪ್ಪಣಿಗಳೆಷ್ಟೋ ....ಇಬ್ಬರದೂ ಬೇರೆ ದಿಕ್ಕು ಅನ್ನುವಂತೆ ಬಿಸಿ ಬಿಸಿ ಚರ್ಚೆ ಮಾಡಿದ್ದೆಷ್ಟೋ ..ಆದರೂ ನಾವು ಒಂದಾಗಿ ನಡೆದದ್ದೇ ಹೆಚ್ಚು ..ಇಬ್ಬರಲ್ಲೂ ಭಯವಿತ್ತೇ ಮತ್ತೆ ಜಗಳ ಮಾಡ್ಬಿಡ್ತೀವಿ ಅಂತ ? ಗೊತ್ತಿಲ್ಲ .....ಒಟ್ಟಿನಲ್ಲಿ ಇಬ್ಬರಲ್ಲಿ ಯಾರೊಬ್ಬರಿಗೂ ಪರಸ್ಪರ ನೋಯಿಸೋದು ಇಷ್ಟ ಆಗ್ತಿರ್ಲಿಲ್ಲ ಅಲ್ಲವಾ ?
ಬಹಳಷ್ಟು ಸಾರಿ ನಿನ್ನ ಹತ್ರ ವಾದ ಮಾಡೋಕೆ ನನಕೈಲಿ ಆಗತಾನೆ ಇರ್ಲಿಲ್ಲ. ನಿನ್ನ ಮಾತು, ತರ್ಕಗಳೋ ನಿರರ್ಗಳ ...ನಿರಂತರವಾಗಿ ಧುಮ್ಮಿಕ್ಕೋ ಭರಚುಕ್ಕಿಯಂತೆ. ನಾನೇ ಒಮ್ಮೊಮ್ಮೆ ಮಾತಾಡೋದು ಬಿಟ್ಟು ಸುಮ್ಮನೆ ನಿನ್ನ ಕಡೆ ನೋಡ್ತಾ ಇದ್ದುಬಿಡ್ತಿದ್ದೆ ..ನೀನು ಮಾತ್ರಾ ಮುಂದುವರಿಸ್ತಾನೆ ಇರ್ತಿದ್ದೆ ..ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಜ್ನಾನೋದಯ ಆದಂತೆ ..ಯಾಕೋ ಸುಮ್ಮನಾದಿ ? ಏನ್ ಯೋಚಿಸ್ತಿದ್ದಿ ? ಅಂತ ತಲೆಗೆ ಮೊಟಕಿ ಕೇಳ್ತಿದ್ದಿ, ಸುಮ್ಮನೆ ಮುಗುಳ್ನಗೋದು ಒಂದೇ ನಾನ್ ಮಾಡ್ತಿದ್ದ ಕೆಲಸ .
ಆದ್ರೆ ಇದ್ದಕ್ಕಿದ್ದಂತೆ ನಿನ್ನ ಮಾತು ಕಡಿಮೆ ಆಗಿದೆ....ಏನಾಯ್ತು.....? ಯಾವ ವಿಷಯ ನಿನ್ನಲ್ಲಿ ಕೊರೀತಿದೆ ಅಂತ ಒಮ್ಮೆ ಹೇಳಿ ಬಿಡಬಾರ್ದ ?ನಿನ್ನದು ಮಾಮೂಲು ಮೌನವಾಗಿದ್ರೆ, ಯಾಕೋ ಬೇಜಾರಾಗಿದ್ದೀಯ ಆಮೇಲೆ ಮತ್ತೆ ಸರಿ ಹೋಗ್ತೀಯ . ಆದ್ರೆ ಸ್ವಲ್ಪ ಏನೋ ಬೇರೆ ಅನ್ನಿಸ್ತಿದೆ ಗೆಳತಿ ಅದೇನು ಹೇಳಮ್ಮ please.....
ನಮ್ಮಲ್ಲಿ ಆತ್ಮೀಯತೆಗೆ ಕೊರತೆ ಯಾವತ್ತಾದರೂ ಇತ್ತ ಹೇಳು? ಎಲ್ಲ ಹೇಳ್ಕೊಳ್ತೀಯ ...ದುಃಖವಾದ್ರೆ ತೊಡೆಮೇಲೆ ಮಲಗಿ ಕಣ್ಣೀರು ಸುರಿಸ್ತೀಯ, ಭುಜಕ್ಕೊರಗಿ ಹಾಗೇ ಕಣ್ಮುಚ್ಚಿ ಸುಮ್ಮನಿದ್ದು ಬಿಡುತ್ತೀಯ ಸ್ವಲ್ಪ ಹೊತ್ತು ..... ನಾನೂ ಜಾಸ್ತಿ ಮಾತಾಡಿಸೋಲ್ಲ ಆಗ ನಿನ್ನ......ಯಾಕಂದ್ರೆ ನ೦ಗೆ ಗೊತ್ತು ನನ್ನ ಜೊತೆಗಿದ್ದೂ ಸ್ವಲ್ಪ ಹೊತ್ತು ಒಂಟಿಯಾಗಿರೋಕೆ ನಿಂಗೆ ಇಷ್ಟ ಅಂತ. ಆದರೂ ನಿಂಗೆ ಏನೋ ಆಗಿದೆ ಅನ್ನಿಸ್ತಿದೆ , ಯಾಕೆ ಏನಾಯ್ತೆ ಅಂದ್ರೆ ನಾನು ನಾರ್ಮಲ್ ಇದೀನಲ್ಲ ಅಂತೀಯ. ನಿನ್ನ ತಮಾಷೆ ಮಾಡೋ ಸ್ವಭಾವ ಎಲ್ಲೋಯ್ತು ಅಂದ್ರೆ ...ಯಾಕೋ ಹೀಗೆ ಇರ್ಬೇಕು ಅನ್ನಿಸ್ತಿದೆ ಅಂತೀಯ ...ಏನಂಥ ಮಾಡ್ಲಿ ಹೇಳು ? ಕಷ್ಟ ಆಗ್ತಿದೆ ಕಣೆ .
ಹೌದು, ನಂಗೂ ಹೇಳೋದಿದೆ ಸ್ವಲ್ಪ....
...ಯಾವತ್ತೂ ನಿನ್ನ ಗೆಳೆಯನಾಗಿಯೇ ಉಳಿದುಬಿಡುವ ಅನಿವಾರ್ಯತೆ ನನಗಿದೆ . ನನ್ನೆಲ್ಲ ಭಾವನೆಗಳನ್ನ ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಶತಾಯ ಗತಾಯ ನಾನು ಕಟ್ಟಿ ಇಡಲೇ ಬೇಕಾಗಿದೆ . ಅದಕ್ಕೇ ನಾನು ನಿಂಗೆ ಯಾವತ್ತೂ ಹೇಳಲಿಲ್ಲ ನಂಗೆ ನೀನು ಇಷ್ಟ ಅಂತ . ತಪ್ಪೋ ಸರಿನೋ ಗೊತ್ತಿಲ್ಲ , ನಿನ್ನ hurt ಮಾಡೋಕೆ ಮಾತ್ರ ಮನಸ್ಸ್ಸು ಒಪ್ಪಲ್ಲಿಲ್ಲ ಕಣೆ . ನೀನು ಇಷ್ಟ ಅಂತ ಹೇಳಿ, ಇತ್ತ ಇರುವಷ್ಟು ಹೊತ್ತು ಸದ್ದಿಲ್ಲದೆ ಕಂಪು ಬೀರಿ - ಸುಳಿವನ್ನೆ ಕೊಡದೆ ಕರಗಿ ಹೋಗಬೇಕೆನ್ನುವ ಮೃದುಲ ಆಕಾಶಮಲ್ಲಿಗೆಯಂಥ ನಿನ್ನ ಮನಸ್ಸನ್ನ ಯಾಕಾದ್ರೂ ತಲ್ಲಣಗೊಳಿಸಲಿ? ಅತ್ತ ಜಾತಿ, ಕಟ್ಟಳೆಗಳಲ್ಲಿ ಕಳೆದುಹೋಗಿರುವ ನಮ್ಮ ಹಿರಿಯರ ಭಾವನೆಗಳನ್ನ ಹೇಗಾದ್ರೂ ನೋಯಿಸ್ಲಿ? ನನ್ನ ದುರಾದೃಷ್ಟ, ನಿನ್ನ ಪ್ರೀತಿಸೋ ಮಾತು ದೂರ ಇರ್ಲಿ ನಿನ್ನ ಬಗ್ಗೆ ಹೀಗನ್ನಿಸಿದೆ ಅಂತ ಹಂಚ್ಕೊಳ್ಲೋಕೂ ಸ್ವಾತಂತ್ರ್ಯ ಇಲ್ಲದ ಪರಿಸ್ಥಿತಿ .ನಿನ್ನ ನಿಷ್ಕಲ್ಮಶ ಸ್ನೇಹ ,ಕೀಟಲೆ ,ಒಣ ಜಗಳಗಳು ,ನಾವು ಒಟ್ಟಾಗಿ ಮಾಡೋ ಟೀಕೆಗಳು , ವಾದಗಳಲ್ಲೇ ಉಸಿರಾಡಿ ಬಿಡಬೇಕು atleast ನೀನು ದೂರ ಹೋಗುವ (?) ವರೆಗಾದರೂ ಅಂತ ಅನ್ಕೊಂಡೆ......ಆದ್ರೆ ನಿನ್ನ ಮೌನ ಸಾವಿರಾರು ಪ್ರಶ್ನೆ ಕೇಳ್ತಿದೆ , ಒಳಗಿನಿಂದ ಏನನ್ನೋ ಹುಡುಕಿ ಹೊರಗೆಳೆದಂತೆ ಅನ್ನಿಸ್ತಿದೆ . ಎಲ್ಲವನ್ನೂ ಹೇಳಿ ಇದೊಂದನ್ನೇ ಹೇಗೆ ಒಳಗಡೆಯೇ ಬಚ್ಚಿಡಲಿ ಹೇಳು?
ಅವತ್ತು ಮತ್ತೆ ನೀನಂದೆ, ನಿನ್ನ ನೋಡಿದ್ರೆ ಯಾಕೋ ಇತ್ತೀಚೆಗೆ respect ಕೊಡ್ಬೇಕು ಅನ್ನ್ಸುತ್ತೆ ಅಂತ . ನಿಜಕ್ಕೂ current shockಹೊಡೆದಂತೆ ಆಗಿದ್ದು ಅವತ್ತೇ ನಂಗೆ . ಆ ಮಾತುಗಳಲ್ಲಿ ಮೇಲು ನೋಟಕ್ಕೆ ಏನೂ ವಿಶೇಷತೆ ಅನ್ನಿಸಲಿಲ್ಲ ಆದರೂ ಏಕೋ ಏನೋ ಇದ್ದಕ್ಕಿದ್ದಂತೆ ಎಲ್ಲಾ ಕಳೆದುಕೊಂಡಂತೆ ಆಗ್ಬಿಡ್ತು . ಗರಿ ಗರಿ ಪ್ರೀತಿ ನಲಿದಾಡೋ ಜಾಗದಲ್ಲಿ ಇದೆಲ್ಲಿಂದ ಹುಟ್ಟಿದ್ದು respect ? ನಂಗೆ ಭಯವಾಗಿದ್ದು ನೀನು ಇದ್ದಕ್ಕಿದ್ದಂತೆ ದೂರಾಗಿಬಿಟ್ಟ್ಯೇನೋ ಅಂತ .....ಅಕ್ಷರಶಃ ನಾನು ನಿನ್ನ ಬದುಕಲ್ಲಿ ಏನಾಗಿದ್ದೀನೋ ಅದೇ ಆಗಿರೋಕೆ ಇಷ್ಟಪಡ್ತೀನಿ ಕಣೆ...ನೀನು ಕೂಡ ಏನಾಗಿದ್ದೀಯೋ ಅದೇ ಆಗಿರು ....ನಿನ್ನ ಚೇಷ್ಟೆಗಳು ಹಾಗೇ ಮುಂದುವರಿಯಲಿ , ನನ್ನನ್ನ ಕಿಚಾಯಿಸುವ ನಿನ್ನತನ ನಿನ್ನದೇ ಆಗಿರಲಿ.
ತನ್ನ ಪಾಡಿಗೆ ತಾನು ದೇವರಂತೆ ಸುಮ್ಮನಿರುವ ಮೂರ್ತಿಗೆ, ನಮ್ಮದೇ ಭಕ್ತಿ, ಭಾವ ಆಚಾರ-ವಿಚಾರ, ಅಲಂಕಾರಗಳನ್ನ ಮಾಡಿ ಏನೋ ಒಂದು ಹೆಸರಿಟ್ಟು, ಸರ್ವಶಕ್ತಿಗಳನ್ನೂ ನೀಡಿ, ಜವಾಬ್ದಾರಿಗಳನ್ನು ಹೇರಿ ನಾವು ಅರಾಮಾಗಿ ಇದ್ದುಬಿಡ್ತೀವಲ್ಲವ? ಹಾಗೆಯೇ ನಮ್ಮ ಬಾ೦ಧವ್ಯ್ಯಕ್ಕೊಂದು ಹೆಸರಿಲ್ಲದ ಗುಡಿ ಕಟ್ಟಿ, ಇರುವ respectಅನ್ನು ಅದಕ್ಕೇ ಕೊಟ್ಟುಬಿಟ್ಟು ಸುಮ್ಮನೆ ಇದ್ದುಬಿಡೋದು ಸೂಕ್ತ ಅಲ್ಲವಾ?
ಯಾರುಬೇಕಾದರೂ ಮಾಡಬಹುದಾದ ಸಣ್ಣ ಪುಟ್ಟ ಸಹಾಯಗಳಿಗೆ, ನೀನು ತೊಂದರೆಯಲ್ಲಿದ್ದಾಗ ನಿನ್ನ ಪ್ರೀತಿಗೆ ಕೇವಲ ಪ್ರತಿ ಪ್ರೀತಿಯಂತೆ ಮೂಡಿಬಂದ ನನ್ನ ಸಾ೦ತ್ವನದ ಮಾತುಗಳಿಗೆ ಮಹತ್ವವಾದುದೇನನ್ನೋ ಆರೋಪಿಸಿ, ನನ್ನನ್ನ ಈ ರೀತಿ ನೋಡಬೇಡ. ನಿನ್ನ ದೊಡ್ಡ ದೊಡ್ಡ ಮಾತುಗಳನ್ನ ಕೇಳ್ತಾ ಇದ್ದರೆ ನಂಗೆ ನಾನು ಏನಾಗಿಬಿಟ್ಟೆನೋ ಅಂತ ಭಯ ಆಗ್ತಿದೆ.ಈ Respect ಅನ್ನೋ ಭೂತ ಗೆಳೆತನಕ್ಕೆ ಸಲ್ಲದ ಭಿಡೆ ಹುಟ್ಟಿಸಿ ನಮ್ಮಿಬ್ಬರ ಮಧ್ಯೆ verticle distance ಹುಟ್ಟಿಸೋದು ಬೇಡ.ಪ್ರೀತಿ ಇದ್ದೂ ಭೌತಿಕವಾಗಿ , ಮಾನಸಿಕವಾಗಿ.....ದೂರ ಆಗೋದಕ್ಕಿಂತ ಈ ರೀತಿ ಲಂಬವಾಗಿ ಆಗಿ ದೂರ ಆಗೋದು ತುಂಬಾ ಅಂದ್ರೆ ತುಂಬಾ ನೋವು ಕೊಡುತ್ತೆ ಕಣೆ. ಹಾಗೆಲ್ಲಾ ಆಗೋದು ಬೇಡ...Please...... .
ಇತಿ ನಿನ್ನ ಪ್ರೀತಿಯ,
ಚಿರವಿಸ್ಮಿತ.
***** ***** *****
ಓದಿಮುಗಿಸಿದ ಕ್ಷಣವೇ ಕಾಗದದಮೇಲೆ ಪಟ ಪಟನೆ ಉದುರಿದ ಅವಳ ಕಂಬನಿಗಳು ಸುಮ್ಮನಿರುವ ಬದಲು ಭೂತಕನ್ನಡಿಯಂತೆ ಕೊನೆಯಸಾಲಿನ ಅಕ್ಷ್ಶರಗಳನ್ನು ಇನ್ನಷ್ಟು ಸ್ಪುಟವಾಗಿಸಿವೆ...ಮತ್ತೆ ಮತ್ತೆ ಕಾಡುತ್ತಿರುವ ಹಾಡು ಇನ್ನೊಮ್ಮೆ ನೆನಪಾಗಿದೆ. ...."ಅರಳುತಿರು ಜೀವದಗೆಳೆಯ ಸ್ನೇಹದ ಸಿಂಚನದಲ್ಲಿ ,ಬಾಡದಿರು ಸ್ನೇಹದ ಹೂವೆ ಪ್ರೇಮದ ಬಂಧನದಲ್ಲಿ ...ಮನಸಲ್ಲೇ ಇರಲಿ ಭಾವನೆ ....ಮಿಡಿಯುತಿರಲಿ ಮೌನವೀಣೆ ಹೀಗೆ ಸುಮ್ಮನೆ ".......

10 March, 2009

ಕಾಡದಿರಲಿ ನಿನ್ನನೆಂದೂ...

ಮನಸಿನ ಒಳ ಹೊರಗನ್ನೆಲ್ಲಾ ಆವರಿಸಿರುವ ಮಂದಾರ ಸಿಂಚನವೇ,
ಮಟ ಮಟ ಮಧ್ಯಾಹ್ನದ ಹೊತ್ತು.....ಗೋಡೆಗೊರಗಿ bolcony ಯ ಮೂಲೆಯಲ್ಲಿ ಒಬ್ಬನೇ ಮುದುರಿ ಮುದುರಿಕೊಂಡು ಕೂರುತ್ತೇನೆ ...ಎಷ್ಟು ನನ್ನ ಮೊಳಕಾಳನ್ನು ನಾನೇ ಗಟ್ಟಿಯಾಗಿ ತಬ್ಬಿಕೊಂಡರೂ ಒಳಗೆಲ್ಲಾ ಮುಟ್ಟಲಾಗದ ಗಟ್ಟಿ ನಿರ್ವಾತ.

ಎಷ್ಟು ಹೊತ್ತಾಯ್ತೊ ನಾನು ಹೀಗೆ ಕೂತು , ತಂಗಾಳಿಗೆ ಅಲ್ಲಾಡುತ್ತಾ ನನ್ನ ತಲೆ ನೇವರಿಸುತ್ತಿರುವ ತೆಂಗಿನ ಗರಿಯ ನೆರಳು ಸುಸ್ತಾಗಿ ಕೈ ಚೆಲ್ಲಿದೆ ಇನ್ನು ಆಗೋಲ್ಲ ನನ್ನಿಂದ ಸಮಾಧಾನ ಮಾಡೋಕೆ ಅಂತ. ಇಲ್ಲಿ ನೋಡು ನನ್ನ ಪಾದದ ಬುಡದಲ್ಲಿ ಸಾಲುಗಟ್ಟಿರೊ ಇರುವೆಗಳೆಲ್ಲ ಒಂದೊಂದೇ ಮುಟ್ಟಿ ಮುಟ್ಟಿ ಮುಂದೆ ಹೋಗುತ್ತಾ ಇದಾವೆ, ಶವಸಂಸ್ಕಾರಕ್ಕೆ ಹೋದಾಗ ಭಾರವಾದ ಎದೆಯಿಂದ ಎಲ್ಲರೂ ಒಂದೊಂದು ಹಿಡಿ ಮಣ್ಣು ಹಾಕಿ ಹೋಗ್ತಾರಲ್ಲ ಹಾಗೆ.

ಅಮ್ಮ,ಅಪ್ಪ,ತಮ್ಮ ತಂಗಿ,ಗೆಳೆಯರೆಲ್ಲ ಸೇರಿ ಹೊದಿಸಿದ್ದ ಪ್ರೀತಿಯ ಹಚ್ಚಡದ ನೂಲಿನ ಸಣ್ಣ ಸಣ್ಣ ಎಳೆಗಳ ಮಧ್ಯದಲ್ಲೇ ಜಾಗ ಮಾಡಿಕೊಂಡು ಬಂದುಬಿಟ್ಟ್ಯಲ್ಲ...ಹೇಯ್ ಅದು ನಿನ್ನ ತಪ್ಪು ಅಂತ ಹೇಳ್ತಾ ಇಲ್ಲಪ್ಪಾ ನಾನು...ಆದರೂ ಎಲ್ಲಿ ಹೋದೆ, ಯಾಕೆ ಹೋದೆ ಅಂತಾನೂ ಹೇಳ್ದೆ ಹೋಗ್ಬಿಡೋದಾ ಪುಟ್ಟಿ?

ಹೋಗ್ಲಿ ಬಿಡು...ಏನಾದರೂ ಆಗ್ಲಿ, ಎಲ್ಲೋ ಒಂದು ಕಡೆ ಸಂತೋಷವಾಗಿ ಇದ್ದುಬಿಟ್ಟಿದ್ದೀಯ ಅನ್ನೋ ಒಂದೇ ಭರವಸೇಲಿ ಉಸಿರಾಡ್ತಿದೀನಿ....ನೀನು ಎಲ್ಲೇ ಇದ್ದರೂ ಅಲ್ಲಿರುವುದೆಲ್ಲ ನಿನ್ನ ಪ್ರೀತಿಯ ಬೆಳಗಿನಿಂದ ಫಳಫಳಿಸಲಿ .

ಈಗ ತಾನೇ ಹುಟ್ಟಿ, ಅಮ್ಮನ ಎದೆ ಹಾಲು ಕುಡಿದು ತೃಪ್ತಿಯಿಂದ, ನಿಶ್ಚಿಂತೆಯಿಂದ ಮಲಗಿದ ಮಗುವಿಗಿರುವಂಥ ನೆಮ್ಮದಿ ನಿನ್ನ ಬಾಳಿಗಿರಲಿ .
ಮಗುವಾಗಿಯೇ ಉಳಿದುಬಿಡು ನೀನು ಬೆಳೆಯುವುದೇ ಬೇಡ, ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.

25 February, 2009

ಅತೀತ

ಅನುದಿನ ಹುಟ್ಟುವ ಸೂರ್ಯ, ಬಿರಿಯುವವು ಹೂಗಳು, ಹೊಟ್ಟೆಗಿಲ್ಲದಿದ್ದರೂ ನಗುತ್ತವೆ ಚಿಂದಿ ಆಯ್ದು ಬಸವಳಿದವಳ ತೊಡೆಯಮೇಲೆ ಮಲಗಿದ ಮಗುವಿನ ತುಟಿಗಳು.
ಆದರೂ......
ನಿತ್ಯನೂತನ ಭಾನು, ಪ್ರತಿ ಹೂ ವದು ಹೊಚ್ಚ ಹೊಸತು ದುಂಬಿಗೆ, ನಗುವ ಮಗುವಿನ ತುಟಿ ರೂಪಿಸುವ ತರಂಗಗಳು ಪ್ರಕೃತಿಗೇ ಬೆರಗು.
ಮತ್ತೊಂದಿದೆ....
ಅದು ಹುಟ್ಟುವುದಿಲ್ಲ, ಅರಳುವುದಿಲ್ಲ, ಕಂಪನಗಳಿಂದ ಬೆರಗುಗೊಳಿಸುವುದಿಲ್ಲ.
ಸಾವಿಲ್ಲದ ಅದರ ಸ್ಥಿತಿ, ಹುಟ್ಟದೆ ಅಸ್ತಿತ್ವದಲ್ಲಿರುವ ಅದರ ರೀತಿ, ಬೇರೆ ಹೆಸರಿಲ್ಲ ಅದಕೆ "ಪ್ರೀತಿ".