25 February, 2009

ಅತೀತ

ಅನುದಿನ ಹುಟ್ಟುವ ಸೂರ್ಯ, ಬಿರಿಯುವವು ಹೂಗಳು, ಹೊಟ್ಟೆಗಿಲ್ಲದಿದ್ದರೂ ನಗುತ್ತವೆ ಚಿಂದಿ ಆಯ್ದು ಬಸವಳಿದವಳ ತೊಡೆಯಮೇಲೆ ಮಲಗಿದ ಮಗುವಿನ ತುಟಿಗಳು.
ಆದರೂ......
ನಿತ್ಯನೂತನ ಭಾನು, ಪ್ರತಿ ಹೂ ವದು ಹೊಚ್ಚ ಹೊಸತು ದುಂಬಿಗೆ, ನಗುವ ಮಗುವಿನ ತುಟಿ ರೂಪಿಸುವ ತರಂಗಗಳು ಪ್ರಕೃತಿಗೇ ಬೆರಗು.
ಮತ್ತೊಂದಿದೆ....
ಅದು ಹುಟ್ಟುವುದಿಲ್ಲ, ಅರಳುವುದಿಲ್ಲ, ಕಂಪನಗಳಿಂದ ಬೆರಗುಗೊಳಿಸುವುದಿಲ್ಲ.
ಸಾವಿಲ್ಲದ ಅದರ ಸ್ಥಿತಿ, ಹುಟ್ಟದೆ ಅಸ್ತಿತ್ವದಲ್ಲಿರುವ ಅದರ ರೀತಿ, ಬೇರೆ ಹೆಸರಿಲ್ಲ ಅದಕೆ "ಪ್ರೀತಿ".

ಆಶಯ

ಎದೆಯ ಗೂಡಿದು ಸಿಮೆಂಟು ಹಾಕಿದ ಸಮಾಧಿ ,
ಉಬುಕಿಬರದಿರಲಿ ಹೊರಗೆ ಪ್ರೀತಿ .
ಹೀಗೆ ಸುಮ್ಮನೆ ಬೀಸುವ ಗಾಳಿಯ ತೇವಕ್ಕೆ ಹುಟ್ಟದಿರಲಿ ಕೆಂಗುಲಾಬಿ .

ನಿಮಿತ್ತ

ಇಲ್ಲಿಯೂ ಅಲ್ಲಿಯೂ ಎಲ್ಲಿಯೋ ,

ಯಾವತ್ತೋ, ಯಾವುದಕ್ಕೋ, ಹೇಗೆ ಹೇಗೋ,

ಏನೇನೋ ಆಗುವುದು ಪ್ರಕೃತಿ ಚಿತ್ತ ,

ನಾನಾದರೋ ಬರಿ ನಿಮಿತ್ತ :)